ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಇತ್ತೀಚಿನ ದಿನಗಳಲ್ಲಿ ನಡೆಯುವ ಅದ್ದೂರಿಯ, ದುಂದು ವೆಚ್ಚಗಳಿಂದ ಕೂಡಿದ ವಿವಾಹಗಳಿಗೆ ಬದಲಾಗಿ, ಸರಳ ವಿವಾಹವಾಗಿ ದುಂದು ವೆಚ್ಚದ ಆರ್ಥಿಕ ಹೊರೆಯಿಂದ ಮುಕ್ತವಾಗುವ ಉದ್ದೇಶದಿಂದ ಸರಳ ವಿವಾಹಗಳಿಗೆ ಪ್ರಾಮುಖ್ಯತೆ ದೊರೆಯುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕೂಡ ಸರಳ ವಿವಾಹವಾಗುವವರಿಗೆ ಮತ್ತು ಸಾಮೂಹಿಕವಾಗಿ ಸರಳ ವಿವಾಹಗಳನ್ನು ಆಯೋಜಿಸುವವರಿಗೆ ಪ್ರೋತಾಹ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆಯಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದಲ್ಲಿ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ) ಆರ್ಥಿಕವಾಗಿ ಹಿಂದುಳಿದವರಿಗೆ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.50,000 ಮತ್ತು ಸಾಮೂಹಿಕ ವಿವಾಹವನ್ನು ಆಯೋಜಿಸುವ ಆಯೋಜಕರಿಗೆ ಅವರ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.5,000 ಗಳ ಪ್ರೋತ್ಸಾಹ ಧನ ನೀಡಲಾಗುವುದು.

ಈ ಯೋಜನೆಯಡಿ ಸರಳ ವಿವಾಹಕ್ಕೆ ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು ಮತ್ತು ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷಗಳು ವಯಸ್ಸು ಇರಬೇಕು. ವಧು-ವರರ ಒಟ್ಟು ವಾರ್ಷಿಕ ಆದಾಯ ರೂ.5 ಲಕ್ಷಗಳ ಮಿತಿಯಲ್ಲಿರಬೇಕು.

ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಸೌಲಭ್ಯವನ್ನು ಜೀವನದಲ್ಲಿ ಒಂದು ಬಾರಿ ಮಾತ್ರ ಪಡೆಯಬಹುದು. ವರನಿಗೆ ಜೀವಂತ ಪತ್ನಿ ಅಥವಾ ವಧುಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ. ವಧುವರರು ಕನಿ಼ಷ್ಠ 7 ದಿನ ಮುಂಚಿತವಾಗಿ ವಿವಾಹವಾಗುವ ಸ್ಥಳದ ಜಿಲ್ಲೆಗಳಲ್ಲಿಯೇ ಅರ್ಜಿ ಸಲ್ಲಿಸತಕ್ಕದ್ದು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 5 ಜೋಡಿಗಳು ಭಾಗವಹಿಸಬೇಕು, ಯಾವುದೇ ಸಮುದಾಯದ ಕನಿಷ್ಠ 5 ಜೋಡಿ ವಿವಾಹವಾದಲ್ಲಿ, ಅಲ್ಪಸಂಖ್ಯಾತರ 3 ಜೋಡಿಗಳು ಇದ್ದರೂ ಸಹ ಅರ್ಹರಿರುತ್ತಾರೆ.

ಈ ಯೋಜನೆಯ ಸೌಲಭ್ಯ ಪಡೆಯಲು, ವಧು-ವರರು ಜಿಲ್ಲಾ ನೋಂದಣಿ/ವಕ್ಫ್ ಬೋರ್ಡ್ ಕಚೇರಿಗಳಲ್ಲಿ ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ಗಳು ವಕ್ಫ್ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು/ಸಮಾಜ ಸೇವೆ ಮಾಡುವ ವ್ಯಕ್ತಿಗಳು ನಡೆಸುವ ಸಾಮೂಹಿಕ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಮಂಜೂರಾದ ಪ್ರೋತ್ಸಾಹಧನದ ಹಣವನ್ನು ವಧುವಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಇಲಾಖಾ ಸಹಾಯವಾಣಿ ಸಂಖ್ಯೆ: 8277799990 ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉತ್ತರ ಕನ್ನಡ, ಕಾರವಾರ ಕಚೇರಿಯ ದೂರವಾಣಿ ಸಂಖ್ಯೆ: 08382-220336 ಅಥವಾ ತಮ್ಮ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಿ, ವಿವರಗಳನ್ನು ಪಡೆಯಬಹುದಾಗಿದೆ.

*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆಯಡಿ, ಪ್ರೋತ್ಸಾಹ ಧನ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಗುರಿ ನಿಗಧಿಯಾಗಿಲ್ಲವಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳ ವಧು ವರರು ಸರಳ ವಿವಾಹಕ್ಕಾಗಿ ಎಷ್ಟೇ ಸಂಖ್ಯೆಯಲ್ಲಿ ಅರ್ಜಿ ನೋಂದಾಯಿಸಿದರೂ ಅವರೆಲ್ಲರಿಗೂ ಈ ಯೋಜನೆಯ ನೆರವು ಒದಗಿಸಲಾಗುವುದು. ಯೋಜನೆಯಲ್ಲಿ ಸರಳ ವಿವಾಹ ನಡೆಸುವ ಸಾಮೂಹಿಕ ವಿವಾಹ ಆಯೋಜಕರಿಗೂ ಕೂಡ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನತೆ ಮತ್ತು ಸಾಮೂಹಿಕ ವಿವಾಹವನ್ನು ಆಯೋಜಿಸುವ ಸಂಘ ಸಂಸ್ಥೆಗಳು, ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು  ಅಶೋಕ್ ಗದ್ದಿಗೌಡರ್, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ‌ನಾಲ್ವರು ಮಕ್ಕಳ ದುರ್ಮರಣ.

ಹೊನ್ನಾವರದಲ್ಲಿ ಕಾರು ಪಲ್ಟಿ: ಇಬ್ಬರು ಸಜೀವ ದಹನ

ಪ್ರೀತಿಸಿದ ಯುವತಿ ಮದುವೆಯಾಗಲು ಒಪ್ಪಲಿಲ್ಲ. ಉಸಿರು ಕಳೆದುಕೊಂಡ ಯುವಕ.