ಅಂಕೋಲಾ: ಲಾರಿಯ ಅಡಿಯಲ್ಲಿ ಮಲಗಿದ್ದ ಯುವಕನೋರ್ವನ ಮೇಲೆ ಲಾರಿ ಹಾಯ್ದು ಹೋದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ವರದರಾಜ ಹೊಟೇಲ್ ಬಳಿ ಈ ಅಪಘಾತ ಸಂಭವಿಸಿದೆ. ಶಿರಕುಳಿ ಗ್ರಾಮದ ಪ್ರಮೋದ ನಾರಾಯಣ ನಾಯ್ಕ (19 )ಮೃತ ದುರ್ದೈವಿ. ಪ್ರಮೋದ ಲಾರಿ ಕ್ಲೀನರ್ ಕೆಲಸ ಮಾಡುತ್ತಿದ್ದು, ಇಂದು ಮಧ್ಯಾಹ್ನ ಮತ್ತೊಂದು ಲಾರಿಯ ಕೆಳಗಡೆ ಮಲಗಿದ್ದ. ಆ ಲಾರಿಯ ಚಾಲಕ ತನ್ನ ವಾಹನದಲ್ಲಿ ಮಲಗಿದ್ದನು. ಚಾಲಕನಿಗೆ ಮೊಬೈಲ್ ಕಾಲ್ ಬಂದಿದ್ದರಿಂದ ಲಾರಿ ಸ್ಟಾರ್ಟ್ ಮಾಡಿ ಹೆದ್ದಾರಿ ಕಡೆ ಸ್ಟೇರಿಂಗ್ ತಿರುಗಿಸಿದ್ದಾನೆ. ಪರಿಣಾಮ ಲಾರಿಯ ಚಕ್ರ ಮಲಗಿದ್ದ ಯುವಕನ ಮೇಲೆ ಹಾಯ್ದು ಹೋಗಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.