ಶಿರಸಿ : ತೋಟಗಾರ್ಸ್ ಕೋ-ಅಪರೇಟಿವ್ ಸೇಲ್ ಸೊಸೈಟಿ ಲಿ. ಶಿರಸಿ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಮಾಡಿರುವ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಉಪನಿಬಂಧಕ ಮಂಜುನಾಥ್ ಸಿಂಗ್ ಅಮಾನತ್ ಮಾಡಲಾಗಿದೆ.
ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಜಿ ಶಶಿಧರ ಆದೇಶ ಮಾಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಅಡಿಕೆ ವಹಿವಾಟು ಸಂಸ್ಥೆಯಾದ ದಿ ತೋಟಗಾರ್ಸ್ ಕೋ-ಅಪರೇಟಿವ್ ಸೇಲ್ ಸೊಸೈಟಿಗೆ 2023ರ ಅಗಸ್ಟ್ 20 ರಂದು T.S.S. ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮತ ಎಣಿಕೆ ನಂತರ ಆಯ್ಕೆಯಾದ ನಿರ್ದೇಶಕರ ಪಟ್ಟಿಯನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದರು. ಆದರೆ, ಚುನಾವಣೆ ಪ್ರಕ್ರಿಯೆಯಲ್ಲಿ ತೀವು ಲೋಪದೋಷ ಜರುಗಿದೆ ಎಂದು ಸಂಘದ ಸದಸ್ಯರಾದ ಗಣಪತಿ ರಾಯ್ಸದ ಮತ್ತು ವಿನಾಯಕ ಭಟ್ಟ ಎರಡು ಚುನಾವಣಾ ದಾವಾ ಅರ್ಜಿಗಳನ್ನು ದಾಖಲಿಸಿದ್ದರು. ದಿ. ತೋಟಗಾರ್ಸ್ ಕೋ-ಅಪರೇಟಿವ್ ಸೇಲ್ ಸೋಸೈಟಿ ಲಿ., ಶಿರಸಿ ಈ ಸಹಕಾರ ಸಂಘದ ಚುನಾವಣೆ ತಕರಾರಿಗೆ ಸಂಬಂಧಿಸಿದ ಸಹಕಾರ ಉಪ ನಿಬಂಧಕರು ಅಂತಿಮ ಆದೇಶವನ್ನು ಮೇ 24ರಂದು ನಿಗಧಿಪಡಿಸಿ, ಸದರಿ ದಿನಾಂಕದಂದು ಅಧಿಕಾರಿಯವರು ಕಛೇರಿ ಕರ್ತವ್ಯಕ್ಕೆ ಹಾಜರಾಗದೇ ಅಜ್ಞಾತ ಸ್ಥಳದಿಂದ ಅಂತಿಮ ಆದೇಶವನ್ನು ಹೊರಡಿಸಿ, ಚುನಾವಣಾ ಫಲಿತಾಂಶ ರದ್ದುಪಡಿಸಿ, ವಿಶೇಷಾಧಿಕಾರಿಯಾಗಿ ಶಿಕ್ಷಣ ಇಲಾಖೆ, ಸಿದ್ಧಾಪುರ ಶಿಕ್ಷಣಾಧಿಕಾರಿಗಳಾದ ಎಂ ಎಸ್ ನಾಯ್ಕ ಅವರನ್ನು ನೇಮಕ ಮಾಡಿದ್ದರು.
ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಇರುವ ಕುರಿತು ಹಾಗೂ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕೇಂದ್ರಸ್ಥಾನವನ್ನು ಬಿಟ್ಟ ಕುರಿತು ಮೇ 25ರಂದು ಕಾರಣ ಕೇಳುವ ನೋಟೀಸನ್ನು ನೀಡಿದ್ದರೂ ಸಹ ಯಾವುದೇ ಉತ್ತರ ನೀಡಿರದ ಮತ್ತು ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಟ್ಟು ಬೇಜಾವಬ್ದಾರಿತನದಿಂದ ವರ್ತಿಸಿ, ಕರ್ತವ್ಯಲೋಪ ಎಸಗಿದ್ದಕ್ಕೆ ಈ ಆದೇಶ ಮಾಡಲಾಗಿದೆ.
ಚುನಾವಣಾ ಫಲಿತಾಂಶ ರದ್ದುಪಡಿಸಿ, ವಿಶೇಷಾಧಿಕಾರಿಯನ್ನು ನೇಮಕಗೊಳಿಸುವ ಮೂಲಕ ಸದರಿ ಸಹಕಾರ ಸಂಘದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿರುವುದಲ್ಲದೇ, ಇಂತಹ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಡಿ ಎ ಆರ್ ಅವರ ತಪ್ಪು ನಿರ್ಣಾಯದ ವಿರುದ್ಧ ಶಿರಸಿಯ ಸಾವಿರಾರು ಸಂಖ್ಯೆಯ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಧಿಕಾರಿಯ ವಿರುದ್ಧ ಬೆಳಗಾವಿಯ ಸಂಯುಕ್ತ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅಧಿಕಾರಿಯೋರ್ವ ಮಾಡಿದ ತಪ್ಪಿಗೆ ರೈತರು ಆಕ್ರೋಶ ಹೆಚ್ಚಾಗಿತ್ತು. ಇದೀಗ ಪ್ರಭಾವಕ್ಕೊಳಗಾದ ಉಪನಿಭಂಧಕರಾದ ಮಂಜುನಾಥ ಸಿಂಗ್ ಸರ್ಕಾರದ ಕ್ರಮ ಎದುರಿಸಬೇಕಾಗಿದೆ.