ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಭಟ್ಕಳ(Bhatkal) : ವೈರಸ್ ಶಿರಾಲಿ ನಾಮಾಂಕಿತದಿಂದ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರಾಗಿರುವ ತಾಲ್ಲೂಕಿನ ಶಿರಾಲಿಯ ಹೆಮ್ಮೆಯ ಚೇತನ, ‘ಬಡವರ ಬಂಧು’ ಎಂದೇ ಜನಪ್ರಿಯರಾಗಿದ್ದ ವೈದ್ಯರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಆರ್. ವಿ. ಸರಾಫ್ (ರಮೇಶ್ ಸರಾಫ್) ಅವರು ನಿಧನರಾಗಿದ್ದಾರೆ.
ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಭಟ್ಕಳ ತಾಲ್ಲೂಕಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ಸಾಧಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು. ಮಕ್ಕಳ ಯಕ್ಷಗಾನ, ಬೇಸಿಗೆ ಶಿಬಿರಗಳ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದ ಅವರ ಸರಳ ಹಾಗೂ ಸೃಜನಶೀಲ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದ್ದರು.
ಡಾ ಆರ್ ವಿ ಸರಾಪ್ ಅವರ ನಿಧನಕ್ಕೆ ಭಟ್ಕಳ ಹಾಗೂ ಉತ್ತರಕನ್ನಡ ಜಿಲ್ಲೆಯ ಜನತೆ ಸಂತಾಪ ಸೂಚಿಸಿದ್ದಾರೆ. ಅವರು ಕೇವಲ ರೋಗಿಗಳಿಗೆ ಗುಣಪಡಿಸುವ ವೈದ್ಯರಷ್ಟೇ ಆಗಿರದೆ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಪೋಷಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ತಮ್ಮಲ್ಲಿಗೆ ಬರುವ ರೋಗಿಗಳಿಗೆ ಕೇವಲ ನಗು,ಹಾಸ್ಯ ಚಟಾಕಿಯಿಂದಲೇ ಅರ್ಧರೋಗ ಗುಣಪಡಿಸುವವರಾಗಿದ್ದರು.
ಶಿರಾಲಿಯ ಸರ್ವತೋಮುಖ ಪ್ರಗತಿಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ, ‘ಬಡವರ ಬಂಧು’ ಎಂದೇ ಖ್ಯಾತರಾಗಿದ್ದ ವೈದ್ಯ ಸಾಹಿತ್ಯ-ಸಾಂಸ್ಕೃತಿಕ ಚೇತನ ಡಾ. ಆರ್. ವಿ. ಸರಾಫ್ (ರಮೇಶ್ ಸರಾಫ್) ಅವರ ಅಗಲಿಕೆ ಭಟ್ಕಳ ತಾಲೂಕಿನ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.
ಡಾ. ಸರಾಫ್ ಅವರು ಕೇವಲ ಸಾಹಿತಿಯಾಗಿರದೆ, ಅಪ್ಪಟ ಸಮಾಜ ಸೇವಕರಾಗಿದ್ದರು. ಅವರ ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆಗಳು ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿತ್ತು.
ಪತ್ರಿಕೋದ್ಯಮ, ಸಾಹಿತ್ಯ ಕೃಷಿ, ಮಕ್ಕಳ ಬೇಸಿಗೆ ಶಿಬಿರಗಳು ಹಾಗೂ ಮಕ್ಕಳ ಯಕ್ಷಗಾನದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರು ಯುವ ಪ್ರತಿಭೆಗಳಿಗೆ ದೊಡ್ಡ ಪ್ರೇರಣೆಯಾಗಿದ್ದರು. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಕನ್ನಡದ ಮೇಲಿನ ಅಪಾರ ಅಭಿಮಾನದಿಂದ ನಾಡು-ನುಡಿಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.
ಕ್ರಿಯಾಶೀಲ ಹಾಗೂ ಸೃಜನಶೀಲ ಬದುಕನ್ನು ಸಾಗಿಸಿದ ಡಾ. ಸರಾಫ್ ಅವರ ನಿಧನಕ್ಕೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ದೇವರು ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ, ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿ, ನಮ್ಮ ಕ್ಷೇತ್ರದ ಒಬ್ಬ ಸತ್ಪ್ರಜೆಯನ್ನು, ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡು ಇಂದು ನಾವೆಲ್ಲರೂ ದುಃಖಿತರಾಗಿದ್ದೇವೆ. ಭಗವಂತನು ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಹಾಗೂ ಇಡೀ ಕುಟುಂಬ ವರ್ಗ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು, ನಾಗರಿಕರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
*
