ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ(State Government Gruhalakshmi Scheme) ಫಲಾನುಭವಿಗಳು ಕಡ್ಡಾಯವಾಗಿ ಇಕೆವೈಸಿ ಅಪಡೇಟ್(EKYC Update) ಮಾಡಿಸಬೇಕು ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದ್ದು ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹೀಗಾಗಿ ಯಶಸ್ವಿಯಾಗಿ ಗೃಹಲಕ್ಷ್ಮೀ ಹಣ ಜಮೆಯಾಗುತ್ತಿರುವ ಫಲಾನುಭವಿಗಳು ಯಾವುದೇ ಸೈಬರ್ ಸೆಂಟರ್ ಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಗ್ಯಾರಂಟಿ(Guarantee) ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ. ನಾಯ್ಕ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಬಿ.ಪಿ.ಎಲ್, ಎ.ಪಿ.ಎಲ್(BPL APL) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3,12,818 ಅರ್ಹ ಫಲಾನುಭವಿಗಳ ಗುರಿ ನಿಗದಿಪಡಿಸಿದೆ.

ಈಗಾಗಲೇ ನೋಂದಣಿಯಾಗಿರುವ ಫಲಾನುಭವಿಗಳಿಗೆ 2026 ಎಪ್ರಿಲ್ ತಿಂಗಳ ವರೆಗಿನ ಹಣವನ್ನು ಡಿಬಿಟಿ(DBT) ಮೂಲಕ ಯಶಸ್ವಿಯಾಗಿ ಪಾವತಿಸಲಾಗಿದೆ. ಆದರೆ ಇತ್ತೀಚಿಗೆ ಯುಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯ ಆಧಾರದ ಮೇಲೆ, ಗೃಹಲಕ್ಷ್ಮೀ ಯೋಜನೆಯಡಿ ಇಕೆವೈಸಿ ಅಪಡೇಟ್ ಮಾಡಿಸಿಕೊಳ್ಳಬೇಕೆಂದು ನಂಬಿ ಹಲವು ಫಲಾನುಭವಿಗಳು ಖಾಸಗಿ ಸೈಬರ್ ಕೇಂದ್ರಗಳು(Cyber Center), ಗ್ರಾಮ ಒನ್(Gram One) ಮತ್ತು ಕರ್ನಾಟಕ ಒನ್ ಗಳಿಗೆ(Karnataka One) ಮುಗಿ ಬೀಳುತ್ತಿರುವುದು ಗಮನಕ್ಕೆ ಬಂದಿದೆ.

ಇದುವರೆಗೆ ಇಕೆವೈಸಿ ಅಪಡೇಟ್ ಕುರಿತಂತೆ ಸರ್ಕಾರದಿಂದ ಯಾವುದೇ ರೀತಿಯ ಮಾರ್ಗಸೂಚಿ ಅಥವಾ ಅಧಿಕೃತ ಸೂಚನೆ ಬಿಡುಗಡೆಯಾಗಿಲ್ಲವಾದ್ದರಿಂದ ಪ್ರಸ್ತುತ ಯಾವುದೇ ಅಡಚಣೆಯಿಲ್ಲದೇ ಬ್ಯಾಂಕ್ ಖಾತೆಗೆ ಹಣ ಬರುತ್ತಿರುವ ಫಲಾನುಭವಿಗಳು ಇಂತಹ ವದಂತಿಗಳಿಗೆ(Roomer) ಕಿವಿಗೊಡಬಾರದು. ವಿನಾಕಾರಣ ಸೈಬರ್ ಸೆಂಟರ್ ಗಳಿಗೆ ಅಲೆದಾಡಿ ನೋಂದಣಿ ಮಾಡಿಸಿಕೊಳ್ಳುವ ಗೋಜಿಗೆ ಹೋಗಬಾರದು ಎಂದು ತಿಳಿಸಿದ್ದಾರೆ.