ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ–ಬಸ್ತಿ–ಕಾಯ್ಕಿಣಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ(NH 66) ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಲಾರಿಯಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಕಾಯ್ಕಿಣಿ ಸಭಾತಿಯ ಕೃಷ್ಣ ಶನಿಯಾರ ನಾಯ್ಕ ಎಂದು ಗುರುತಿಸಲಾಗಿದೆ. ಅವರು ಸಾರದೊಳೆ ಹಳೆಕೋಟೆ ಹನುಮಂತ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದರೆಂದು ತಿಳಿದುಬಂದಿದೆ.

ಮಂಗಳೂರಿನಿಂದ ಬೆಳಗಾವಿ ಕಡೆಗೆ(Manglore to Belagavi) ಸಾಗುತ್ತಿದ್ದ ಲಾರಿಯು ಬಸ್ತಿ–ಕಾಯ್ಕಿಣಿ ಬಳಿ(Basti – Kaikini) ಮಾರ್ಗದ ದಿಕ್ಕು ಸ್ಪಷ್ಟವಾಗದೆ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ್ದ ಕೃಷ್ಣ ನಾಯ್ಕ ಅವರ ಮೇಲೆ ಹರಿದು, ಚಕ್ರದಡಿಯಲ್ಲಿ ಎಳೆದುಕೊಂಡು ಹೋಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ನಂತರ ಲಾರಿಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಇದೇ ವೇಳೆ ಲಾರಿಯಡಿಯಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳು ಮುಂದಾದಾಗ, ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಅಪಘಾತಕ್ಕೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸ್ಥಳೀಯರು, ಮೃತದೇಹವನ್ನು ತೆರವುಗೊಳಿಸಲು ಅವಕಾಶ ನೀಡದೆ ಪ್ರತಿಭಟನೆ ನಡೆಸಿದರು. ಕಳೆದ ಆರೇಳು ತಿಂಗಳಿಂದ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸರಿಯಾದ ಮಾರ್ಗಸೂಚಿ ಹಾಗೂ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣವೇ ಈ ದುರ್ಘಟನೆ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎನ್‌ಎಚ್‌ಎಐ(NHAI) ಹಾಗೂ ಗುತ್ತಿಗೆ ಕಂಪನಿಯ(Contract Company) ವಿರುದ್ಧ ಜನರು ತೀವ್ರ ಅಸಮಾಧಾನ ಹೊರಹಾಕಿದರು.

ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹೇಶ್, ಡಿವೈಎಸ್ಪಿ ಗಿರೀಶ್ ಸೇರಿದಂತೆ ಪೊಲೀಸ್(Police) ಹಾಗೂ ಕಂದಾಯ ಇಲಾಖೆಯ(Revenue Department) ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಗುತ್ತಿಗೆ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನವಾಗಿತ್ತು. ಮುರ್ಡೇಶ್ವರ ಪೊಲೀಸರು(Murdeshwar Police) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.