ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಮಹಾರಾಷ್ಟ್ರ(Maharashtra): ನಾಲ್ಕು ತಲೆಮಾರುಗಳ ಬಳಿಕ ಸುದೀರ್ಘ ಕಾಯುವಿಕೆಯ ನಂತರ ಹೆಣ್ಣು ಮಗು(Girl Child) ಹುಟ್ಟಿದ ಖುಷಿಯಲ್ಲಿ ಕುಟುಂಬವೊಂದು ಮಗುವನ್ನು ತಾಯಿಯೊಂದಿಗೆ ರಥದಲ್ಲಿ ಕೂರಿಸಿ ಅದ್ಧೂರಿ ಮೆರವಣಿಗೆ(Procession) ಮಾಡಿದ ಘಟನೆ ನಡೆದಿದೆ.

ಮಹಾರಾಷ್ಟ್ರದ(Maharashtra) ಬೀಡ್ ಜಿಲ್ಲೆಯ ಪರಳಿ ತಾಲೂಕಿನಲ್ಲಿ ದಹಿಫಲೆ ಕುಟುಂಬವೊಂದರಲ್ಲಿ ಅಪರೂಪದ ಹಾಗೂ ಹೃದಯಸ್ಪರ್ಶಿ(Heart Touching) ಘಟನೆಗೆ ಸಾಕ್ಷಿಯಾಗಿದೆ. ಪರಳಿಯ ದಹಿಫಲೆ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ ಕೇವಲ ಗಂಡು ಮಕ್ಕಳೇ ಜನಿಸುತ್ತಿದ್ದರು. ಕುಟುಂಬದಲ್ಲಿ ಹೆಣ್ಣು ಮಗುವಿರಲಿಲ್ಲ. ಇತ್ತೀಚೆಗೆ ಋಷಿಕೇಶ್‌ ದಹಿಫಲೆ ಹಾಗೂ ಅವರ ಪತ್ನಿಗೆ ಮುದ್ದಾದ ಹೆಣ್ಣು ಮಗು ಜನ್ಮತಾಳಿತು. ಮಗುವಿಗೆ ‘ಗಾರ್ಗಿ’ ಎಂದು ಹೆಸರಿಡಲಾಗಿದೆ.

ಆಸ್ಪತ್ರೆಯಿಂದ ತಾಯಿ ಮತ್ತು ನವಜಾತ ಮಗು ಡಿಸ್ಟಾರ್ಜ್ ಆದಾಗ, ಇಡೀ ಕುಟುಂಬವು ಹಬ್ಬದಂತೆ ಸಂಭೃಮಿಸಲು ನಿರ್ಧರಿಸಿತು. ಅದೇ ರೀತಿ ಮಗು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲು ಹೂವುಗಳಿಂದ ಸುಂದರವಾಗಿ ಅಲಂಕರಿಸಿದ ರಥವನ್ನು ತರಿಸಿದ್ದರು. ಮಂಗಳವಾದ್ಯ, ಡೊಳ್ಳು-ಕುಣಿತ (ಡೋಲ್-ತಾಶಾ), ತಾಳ-ತಂಬೂರಿಗಳ ನಾದ ಹಾಗೂ ಬ್ಯಾಂಡ್-ಬಾಜಾಗಳೊಂದಿಗೆ ಸಂಭ್ರಮದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಮನೆಯವರೆಲ್ಲರೂ ರಥದ ಮುಂದೆ ನೃತ್ಯ ಮಾಡುತ್ತಾ, ಮಗುವಿನ ಮೇಲೆ ಹೂವಿನ ಮಳೆ ಸುರಿಸುತ್ತಾ ಅತ್ಯಂತ ಸಡಗರದಿಂದ ಗಾರ್ಗಿಯನ್ನು ಮನೆಗೆ ಕರೆತಂದರು.

ಒಂದು ಕಾಲದಲ್ಲಿ ಬೀಡ್ ಜಿಲ್ಲೆಯು ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳಿಗೆ ಕುಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಜಾಗೃತಿ ಕಾರ್ಯಕ್ರಮಗಳು ಮತ್ತು ಜನರ ಬದಲಾದ ಮನಸ್ಥಿತಿಯಿಂದಾಗಿ ಹೆಣ್ಣು ಮಕ್ಕಳ ಜನನ ಪ್ರಮಾಣ ಹೆಚ್ಚಾಗುತ್ತಿದೆ.

200 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ರಥದಲ್ಲಿ ಕರೆತಂದು ಹಬ್ಬದಂತೆ ಆಚರಿಸಿದ ದಹಿಫಲೆ ಕುಟುಂಬದ ನಡೆಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.