ಅಂಕೋಲಾ(ANKOLA) : ತಾಲೂಕಿನ ಶಿರೂರಿನಲ್ಲಿ ಶೋಧ ನಡೆಸುತ್ತಿರುವ ತಂಡ ಮೃತದೇಹ ಮೂಳೆಗಳು ಪತ್ತೆ ಮಾಡಿದೆ.
ಕೆಲ ದಿನಗಳಿಂದ ಗಂಗಾವಳಿ ನದಿಯಲ್ಲಿ (GANGAVALI RIVER) ಡ್ರೆಜಿಂಗ್ ಯಂತ್ರಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಕೇರಳದ ಅರ್ಜುನ್(KERAL ARJUN) ಮೃತದೇಹ ಸಮೇತ ಟ್ರಕ್ ಪತ್ತೆ ಮಾಡಲಾಗಿತ್ತು. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆಂದು ಎಲ್ಲರೂ ಊಹಿಸಿದ್ದರು. ಆದರೆ ಕಾರ್ಯಾಚರಣೆ ಮುಂದುವರಿದಿತ್ತು. ತಂಡದಲ್ಲಿದ್ದ ಮುಳುಗು ತಜ್ಞರು ಸತತವಾಗಿ ಇಂಚಿಂಚು ಸ್ಥಳದಲ್ಲಿ ಶೋಧಿಸಿದ್ದರು. ಹೀಗಾಗಿ ಮೃತದೇಹ ಮೂಳೆಗಳು ದೊರಕಿದೆ.
ಜುಲೈ 16ರಂದು ಸಂಭವಿಸಿದ ಗುಡ್ಡ ಕುಸಿತ ಘಟನೆಯಲ್ಲಿ ಒಟ್ಟು 11ಜನ ಕಣ್ಮರೆಯಾಗಿದ್ದರು. ಆ ಸಂದರ್ಭದಲ್ಲಿ ಎಂಟು ಮೃತದೇಹ ದೊರೆತು ಬಳಿಕ ಕೆಲ ದಿನಗಳ ಹಿಂದಷ್ಟೇ ಅರ್ಜುನ್ ಶವವಾಗಿ ಪತ್ತೆಯಾಗಿದ್ದ. ಆದರೆ ಸ್ಥಳೀಯರೇ ಆದ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಪತ್ತೆಯಾಗಿರಲಿಲ್ಲ. ಇಂದು ಸಿಕ್ಕ ಮೃತದೇಹ ಕೈ ಮೂಳೆ ಜಗನ್ನಾಥ ಅವರದ್ದೋ ಅಥವಾ ಲೋಕೇಶ್ ಅವರದ್ದೋ ತಿಳಿದು ಬಂದಿಲ್ಲ. ಇದು ಮನುಷ್ಯನ ಮೂಳೆಯೆಂದು ವೈದ್ಯರು ದೃಢಿಕರಿಸಿದ್ದಾರೆ.
ಜಗನ್ನಾಥ ಅವರು ಅಂದು ಕೆಂಪು ಮತ್ತು ಕ್ರೀಮ್ ಬಣ್ಣದ ಶರ್ಟ್ ಮತ್ತು ಲುಂಗಿ ಧರಿಸಿದ್ದರು. ಲೋಕೇಶ್ ಹಳದಿ ಮತ್ತು ಹಸಿರು ಮಿಶ್ರಿತ ಬಣ್ಣದ ಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿರುವ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : ಗೋವಾದಲ್ಲಿ ಬಾಂಗ್ಲಾ ನುಸುಳುಕೋರರಿರುವ ಸಾಧ್ಯತೆ