ಕಾರವಾರ(KARWAR) : ಕಾರವಾರ ಮತ್ತು ಗೋವಾ(GOA) ಸಂಪರ್ಕಿಸುವ ಕಾಳಿ ಸೇತುವೆ ಮೇಲಿಂದ ಬಿದ್ದ  ಲಾರಿ ಎತ್ತಲು ಬಾರೀ ಕಾರ್ಯಾಚರಣೆ ನಡೆಸಲು ತಯಾರಿ ನಡೆದಿದೆ.

ಲಾರಿ ಮೇಲೆತ್ತಲು ಸಾಧ್ಯವಾಗದ ಕಾರಣ ಮುಳುಗು ತಜ್ಞ ಈಶ್ವರ್ ಮಲ್ಪೆ(ISHWAR MALPE) ತಂಡ ಈಗಾಗಲೇ ಆಗಮಿಸಿದ್ದು ಸೇತುವೆ ಕೆಳಕ್ಕೆ ಬಿದ್ದಿರುವ ಲಾರಿಗೆ ರೋಪ್ ಕಟ್ಟಲಾಗಿದೆ. ಇನ್ನೂ ಕೆಲ ಹೊತ್ತಿನಲ್ಲಿ ಲಾರಿಯನ್ನ ದಡಕ್ಕೆ ತರುವ ಕಾರ್ಯ ನಡೆಯಲಿದೆ.

ಆಗಸ್ಟ್ ಏಳರಂದು ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ 41 ವರ್ಷ ಹಳೆಯ ಕಾಳಿ ಸೇತುವೆ ಕುಸಿದು ಬಿದ್ದಿದ್ದು ತಮಿಳುನಾಡು ಮೂಲದ ಲಾರಿಯೊಂದು ಬಿದ್ದಿತ್ತು. ಅದೃಷ್ಟವಾಶಾತ್ ಚಾಲಕನನ್ನ ಸ್ಥಳೀಯರು ಬಚಾವ್ ಮಾಡಿದ್ದರು.

ಘಟನೆ ನಡೆದು ಒಂಬತ್ತು ದಿನಗಳ ನಂತರ ಇಂದು ಲಾರಿ ಮಾಲೀಕನ ಮನವಿ ಮೇರೆಗೆ ಲಾರಿ ದಡಕ್ಕೆ ಎಳೆಯುವ ಕಾರ್ಯ ನಡೆಯಲಿದೆ. ಈಗಾಗಲೇ ಲಾರಿಗೆ ರೋಪ್ ಕಟ್ಟಿ ಸಿದ್ದಪಡಿಸಲಾಗಿದೆ. ಆದರೆ ನದಿಯಲ್ಲಿ ಲಾರಿ ಎಳೆಯುವುದು ಸಹ ಸವಾಲಿನ ಕೆಲಸವಾಗಿದೆ.

ಆದರೂ ಕೂಡ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲಕ್ಕೆತ್ತಲಾಗುತ್ತದೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ನಾರಾಯಣ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು.