ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಝಾನ್ಸಿ(zhansi) :  ಹೆರಿಗೆ ನೋವಿನಿಂದ ಸಾವು-ನೋವಿನ ನಡುವೆ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಭಾರತೀಯ ಸೇನೆಯ(Indian Army) ವೈದ್ಯರೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ(Humanity) ಮೆರೆದಿದ್ದಾರೆ.

ಉತ್ತರ ಪ್ರದೇಶದ(Uttarapradesh) ಝಾನ್ಸಿ ರೈಲು ನಿಲ್ದಾಣದಲ್ಲಿ(jhansy Railway Station) ಈ ಘಟನೆ ನಡೆದಿದ್ದು, ಭಾರತೀಯ ಸೇನೆಯ ವೈದ್ಯ ಮೇಜರ್ ಡಾ.ರೋಹಿತ್ ಬಚ್‌ವಾಲಾ (31) ಎಂಬುವವರು ಮಹಿಳೆಗೆ ಹೆರಿಗೆ ಮಾಡಿಸಿ ಆಕೆಯ ಮತ್ತು ಆಕೆಯ ಮಗುವಿನ ಜೀವ ಉಳಿಸುವ ಕೆಲಸ ಮಾಡಿದ್ದಾರೆ.

ಪನವೇಲ್-ಗೋರಖಪುರ ಎಕ್ಸ್‌ಪ್ರೆಸ್ (Panvel-Gorakhpur Express) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಜುಲೈ ಐದರಂದು ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನೋವು ಹೆಚ್ಚಾಗಿದ್ದರಿಂದ  ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮಹಿಳೆ ನೋವಿನಿಂದ ಕಿರುಚಾಡುವುದನ್ನು ಕಂಡ ಟಿಕೆಟ್ ಚೆಕ್ಕಿಂಗ್ ಸಿಬ್ಬಂದಿ ಮತ್ತು ಸೇನಾ ವೈದ್ಯಾಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾಗಿ ಮಹಿಳೆಗೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ರೈಲಿಗಾಗಿ ಕಾಯುತ್ತಿದ್ದ ಮೇಜರ್ ಡಾ.ರೋಹಿತ್ ಬಚ್‌ವಾಲಾ ಅವರು  ತುಂಬು ಗರ್ಭಿಣಿಯನ್ನು ಕಂಡು ಸಹಾಯ ಮಾಡಲು ಮುಂದಾದರು. ರೈಲ್ವೆ ಸಿಬ್ಬಂದಿಯ ನೆರವಿನೊಂದಿಗೆ ಹೇರ್ ಕ್ಲಿಪ್, ಪಾಕೆಟ್ ಚಾಕು ಬಳಸಿ ಹೆರಿಗೆ ಮಾಡಿಸಿದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರೋಹಿತ್ ‘ಹೊಟ್ಟೆ ನೋವಿನಿಂದ ಬಳಲಿದ್ದ ಮಹಿಳೆಯನ್ನು ಕಂಡ ಕೂಡಲೇ ಸಮಯ ವ್ಯರ್ಥ ಮಾಡದೇ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಲು ಸಿದ್ಧನಾದೆ. ವೈದ್ಯರು ತುರ್ತು ಸಂದರ್ಭಕ್ಕೆ ಸದಾ ಸಿದ್ಧರಾಗಿರಬೇಕು. ದೇವರ ದಯೆಯಿಂದ ನಾನು ಎರಡು ಜೀವಗಳನ್ನು ಉಳಿಸಿದೆ’ ಎಂದು ಖುಷಿ ಹಂಚಿಕೊಂಡರು.

ಸುಸೂತ್ರವಾಗಿ ಹೆರಿಗೆಯಾದ  ಬಳಿಕ ಮಗು ಮತ್ತು ಬಾಣಂತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ.

ಇದನ್ನು ಓದಿ : ಗುರು ನಮನ ಬಳಗದಿಂದ ಸ್ಕೂಲ್ ಬ್ಯಾಗ್ ವಿತರಣೆ

ಪೊಲೀಸ್ ದಾಳಿ. ಮುಂಡಳ್ಳಿ ಅರಣ್ಯದಲ್ಲಿ ಎಲೆಮಾನವರ ಬಂಧನ.

ರಸ್ತೆ ಕುಸಿತ ಹಿನ್ನಲೆ. ಬದಲಿ ಮಾರ್ಗ ಅನುಸರಿಸಲು ಸೂಚನೆ.