ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರು ಕಾರವಾರದ ಕದಂಬ ನೌಕಾನೆಲೆಗೆ(Kadamba Naval Base) ಭಾನುವಾರ ಭೇಟಿ ನೀಡಿದರು.

ಭಾರತೀಯ ನೌಕಾಪಡೆಯ(Indian Navy) ಐ.ಎನ್.ಎಸ್. ವಾಗ್ಮೀರ್(INS Vagmir) ಜಲಾಂತರ್ಗಾಮಿ ನೌಕೆಯಲ್ಲಿ (Submarine) ಅವರು ಪ್ರಯಾಣಿಸಿದ ದೇಶದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನೌಕಾಪಡೆಯ ಸಾಮರ್ಥ್ಯ ಹಾಗೂ ಕಾರ್ಯಾಚರಣೆಗಳ ಕುರಿತು ನೌಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಳಿಗ್ಗೆ ಗೋವಾದಿಂದ ಹೆಲಿಕಾಪ್ಟರ್ ಮೂಲಕ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಭವ್ಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ.ಎನ್. ಉಪಸ್ಥಿತರಿದ್ದರು.
ಭಾರತೀಯ ನೌಕಾಪಡೆಯ ಚೀಫ್ ಆಫ್ ದ ನೇವಲ್ ಸ್ಟಾಫ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಕಾರವಾರ ನೇವಲ್ ಬೇಸ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಸೇರಿದಂತೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿಯ ಈ ಐತಿಹಾಸಿಕ ಭೇಟಿಗೆ ನೌಕಾಪಡೆ ಮತ್ತು ನಾಗರಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
