ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಉತ್ತರಕನ್ನಡ ಜಿಲ್ಲೆಯ
ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಕೆಡಿಸಿಸಿ) ಅಧ್ಯಕ್ಷರಾಗಿ ನಿರೀಕ್ಷೆಯಂತೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Yallapur MLA Shivaram Hebbar) ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಜೊಯಿಡಾದ ಕೃಷ್ಣ ದೇಸಾಯಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಕೆಡಿಸಿಸಿ ಬ್ಯಾಂಕ್(KDCC Bank) ಮಾಜಿ ಸಚಿವ ಶಿವರಾಮ್ ಹೆಬ್ಬಾರ್(Shivaram Hebbar) ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಬೆಂಬಲಿಗರ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೆಬ್ಬಾರ್ ತಂಡದ 11 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಸಚಿವ ಮಂಕಾಳ ವೈದ್ಯ ತಂಡದ ಕೇವಲ ಐವರು ಆಯ್ಕೆಯಾಗಿದ್ದರು.
ಸೋಮವಾರ ಆಯ್ಕೆ ಪ್ರಕ್ರೀಯೆ ನಡೆದು ಶಾಸಕರಾದ ಶಿವರಾಮ್ ಹೆಬ್ಬಾರ್(Shivaram Hebbar) ಮತ್ತೊಮ್ಮೆ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಪಾರುಪತ್ಯವನ್ನು ಮೆರೆದಿದ್ದಾರೆ. ಹೆಬ್ಬಾರ್ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರೂ, ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಕಂಡುಬಂದಿತು. ಕಾರವಾರದ ಪ್ರಕಾಶ್ ಗುನಗಿ, ಅಂಕೋಲಾದ ಬೀರಣ್ಣ ನಾಯಕ (ಸುಂಕೇರಿ ಬಾಬು) ಹಾಗೂ ಜೊಯಿಡಾದ ಕೃಷ್ಣ ದೇಸಾಯಿ ಅವರು ಉಪಾಧ್ಯಕ್ಷ ಪಟ್ಟಕ್ಕಾಗಿ ಪ್ರಬಲ ಕಸರತ್ತು ನಡೆಸಿದ್ದರು.
ಅಂತಿಮವಾಗಿ ಕೃಷ್ಣ ದೇಸಾಯಿ ಅವರು ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಗಾದಿಗೇರಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶಿವರಾಮ್ ಹೆಬ್ಬಾರ್, ಆಯ್ಕೆಯಾದ ಎಲ್ಲಾ ನಿರ್ದೇಶಕರು ಪಕ್ಷಭೇದ ಮರೆತು ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸೋಣ. ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯೋಣ” ಎಂದರು.
ಇದನ್ನು ಓದಿ : ಗೋಕರ್ಣದಲ್ಲೊಂದು ಪುಣ್ಯದ ಸಾವು. ಶಿವನ ಪಾದ ಸೇರಿದ ರತ್ನಾಕರ.
