ಅಂಕೋಲಾ: ಶಿರೂರು ಗುಡ್ಡ ಕುಸಿತ ಘಟನೆ ಬಳಿಕ ಸೂಚಿಸಿದ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪ್ರಯಾಸ ಅನುಭವಿಸುತ್ತಿರುವವರೊಂದಿಗೆ ಘಟನೆ ನಡೆದಿದೆ.
ಅಂಕೋಲಾದಿಂದ ಕುಮಟಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗ ಬಂದ್ ಆದ ಹಿನ್ನಲೆ ವಾಹನಗಳು ಹೊಸಕಂಬಿ ಹಿಲ್ಲೂರು ರಾಜ್ಯ ಹೆದ್ದಾರಿಯ ಮೂಲಕ ಸಂಚಾರ ಆರಂಭಿಸಿದೆ. ಭಾರಿ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವತ್ತು ಕೆಲ ಕಡೆಗಳಲ್ಲಿ ವಾಹನ ಪಲ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ಇಲ್ಲಿನ ಹಿಲ್ಲೂರು ಭಾಗದ ಹಳೆಯ ಸೇತುವೆಗೆ ಅಪಾಯಕಾರಿಯಾಗಿದೆ. ಅಲ್ಲಲ್ಲಿ ವಾಹನಗಳು ಪಲ್ಟಿಯಾಗಿ ಸಂಚಾರ ಅಸ್ತವ್ಯಸ್ತವಾದಾಗ ಸ್ಥಳೀಯ ಯುವಕರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಂದೆ ನಿಂತು ರಸ್ತೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಕಾಲಕಾಲಕ್ಕೆ ರಸ್ತೆಯನ್ನು ದುರಸ್ತಿ ಮಾಡದೆ ಇರುವುದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಂಬಂಧಿಸಿದ ಇಲಾಖೆಯು ಅದಕ್ಕೆ ಜವಾಬ್ದಾರಿ ಹೊತ್ತು ನಿರ್ವಹಣೆ ಮಾಡಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.