ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಉತ್ತರಕನ್ನಡ ಜಿಲ್ಲೆಯ ಖ್ಯಾತ ಛಾಯಾಗ್ರಾಹಕ, ಪೋಟೋ ಜರ್ನಲಿಸ್ಟ್(Photo Journalist) ಕಾರವಾರದ ಪಾಂಡುರಂಗ ಹರಿಕಂತ್ರ ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಮಗ, ಮಗಳು, ಅಳಿಯ ಹಾಗೂ ಬಂಧು ಬಾಂಧವರನ್ನ ಅಗಲಿದ್ದಾರೆ.
ಕಾರವಾರದ ಕೋಣೆವಾಡ ನಿವಾಸಿಯಾದ ಪಾಂಡುರಂಗ ಅವರು ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಲ್ಲಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಪೋಟೋಗ್ರಫಿಯನ್ನ ಹವ್ಯಾಸವಾಗಿ ಇಟ್ಟುಕೊಂಡವರು. ಕಾರವಾರದ ಅದ್ಬುತ ನಿಸರ್ಗ ಸೌಂದರ್ಯವನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದ ಅಪರೂಪದ ಪೋಟೋಗ್ರಾಫರ್ ಎನಿಸಿಕೊಂಡಿದ್ದರು. ಕಾರವಾರ ಕಡಲತೀರ(Karwar Beach) ಮತ್ತು ಕಾಳಿ ನದಿಯ (Kali River) ಮೀನುಗಾರರ ಜೀವನ ಶೈಲಿಯ ಅತ್ಯುತ್ತಮ ಚಿತ್ರಗಳು ನಾಡಿನ ವಿವಿಧ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಂಡಿದ್ದವು.
ಸೀಬರ್ಡ್ ನೌಕಾನೆಲೆ(Seabird Naval) ಆಗುವ ಪೂರ್ವದಲ್ಲಿ ಮುಂಜಾನೆಯೆ ತಮ್ಮ ಕ್ಯಾಮರಾ ಬ್ಯಾಗ್ ಹೆಗಲಿಗೇರಿಸಿ ನಡೆಯುತ್ತಿದ್ದ ಪಾಂಡುರಂಗ ಅವರ ಕ್ಯಾಮೆರಾದಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಚಿತ್ರ ಸೆರೆಯಾಗುತ್ತಿದ್ದವು. ಕಡಲಮಕ್ಕಳ, ಕೃಷಿಕರ, ಪಕ್ಷಿಗಳ ಅದ್ಬುತ ಚಿತ್ರಗಳು ವಾಹ್ವ್ ಅನಿಸುತ್ತಿದ್ದವು. ಕರಾವಳಿ ಜನರ ನಾಡಿಮಿಡಿತವನ್ನ ಬಿಂಬಿಸುವ ಸಾವಿರಾರು ಚಿತ್ರಗಳು ಅವರ ಅಲ್ಬಂನಲ್ಲಿದ್ದಿದು ವಿಶೇಷ.
ನಾಡಿನ ವಿವಿಧ ಸಂಘಟನೆಗಳು ಅವರನ್ನ ಪುರಸ್ಕರಿಸಿ ಗೌರವಿಸಿರೋದು ಸ್ಮರಣೀಯ. 2018ರಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ಪೋಟೋ ನ್ಯೂಸ್ (Karnataka Photo News) ಸುದ್ದಿ ಸಂಸ್ಥೆಯ ಕಾರವಾರ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಲವು ಬಾರೀ ತಾವು ತೆಗೆದ ಚಿತ್ರಗಳ ಪ್ರದರ್ಶನವನ್ನ ನಡೆಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.
ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪಾಂಡುರಂಗ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರದಂದು ಮತ್ತೊಮ್ಮೆ ಧಿಡೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಇಹಲೋಕ ತ್ಯಜಿಸಿದ್ದಾರೆ. ಶನಿವಾರ ಗಣ್ಯರ, ಊರವರ, ಸಮಾಜ ಬಾಂಧವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ನಾಗರಿಕರು ಅಂತಿಮ ದರ್ಶನ ಪಡೆದರು.
ಇದನ್ನು ಓದಿ : ಭಟ್ಕಳದಲ್ಲಿ ಜಾನುವಾರು ಹತ್ಯೆ ಆರೋಪಿಗಳನ್ನು ಬಂಧಿಸಿದ ಪೊಲೀಸರು .
	
						
							
			
			
			
			
