ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ(Honnavar): ತಾಲೂಕಿನ ಕಾಸರಕೋಡು ಟೊಂಕದಲ್ಲಿ ಯೋಜಿಸಿರುವ ವಾಣಿಜ್ಯ ಬಂದರು ಕಾಮಗಾರಿಯ ಸರ್ವೇ ಬಾರೀ ವಿರೋಧದ ನಡುವೆ ಆರಂಭಿಸಲಾಗಿದೆ.
ಜಿಲ್ಲಾಡಳಿತ ಇಂದು ಟೊಂಕ, ಕಾಸರಕೋಡು ಭಾಗದಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಸರ್ವೇ ಕಾರ್ಯಕ್ಕೆ ಸಂಬಂಧಪಟ್ಟ ಕಂಪನಿಗೆ ಅನುವು ಮಾಡಿಕೊಟ್ಟಿತ್ತು. ಬಾರೀ ಪೊಲೀಸ್ ಸರ್ಪಗಾವಲಿನ ನಡುವೆ ಇಂದು ಗ್ರಾಮದ ವಿವಿಧ ಪ್ರದೇಶಗಳಲ್ಲಿ ಸಿಬ್ಬಂದಿಗಳು ಸರ್ವೇ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಯೋಜನೆ ವಿರೋಧಿಸಿ ನಾಗರಿಕರು ಸಮುದ್ರಕ್ಕೆ ಧುಮುಕಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಆಗ್ರಹಿಸಿದರು. ಇದೆ ವೇಳೆ ಮೂವರು ಮಹಿಳೆಯರು ಅಸ್ವಸ್ಥಗೊಂಡರು. ಗ್ರಾಮಸ್ಥರೆ ಅಸ್ವಸ್ತಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ಥಿತಿಯಲ್ಲಿರುವ ಓರ್ವ ಮಹಿಳೆಯನ್ನ ಉಡುಪಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಕಡಲತೀರದಲ್ಲಿ ಕಂಬಗಳನ್ನ ಹುಗಿಯಲು ಮುಂದಾದಾಗ ಪ್ರತಿಭಟನಕಾರರು ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಗ್ರಾಮಸ್ಥನೋರ್ವನನ್ನ ವಶಕ್ಕೆ ಪಡೆದುಕೊಳ್ಳಲಾಯಿತು. ಬಳಿಕ ಗ್ರಾಮದ ಹಲವು ಮುಖಂಡರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡರು.ಮಧ್ಯಾಹ್ನ ಸಂದರ್ಭದಲ್ಲಿ ಪ್ರತಿಭಟನೆಯ ಕಾವು ತಣ್ಣಗಾದಂತೆ ಕಂಡು ಬಂತು.
ಹೈದ್ರಾಬಾದ್ ಮೂಲದ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಟೊಂಕ, ಕಾಸರಕೋಡು ನಲ್ಲಿ ವಾಣಿಜ್ಯ ಬಂದರು ಯೋಜನೆ ಕೈಗೆತ್ತಿಕೊಂಡಿದೆ. ಬಂದರು ಇಲಾಖೆಯು 30 ವರ್ಷಕ್ಕೆ 92 ಎಕರೆ ಜಾಗವನ್ನು ಲೀಸ್ ನೀಡಿ 2010 ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಮೀನುಗಾರರು ವಾಸಿಸುವ ಪ್ರದೇಶದಲ್ಲಿ ಯೋಜನೆ ಮಾಡುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ. ಸರ್ಕಾರ ಜಿಲ್ಲಾಡಳಿತದ ಮೂಲಕ ಬಂದರು ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡುತ್ತಿರುವುದು ಮೀನುಗಾರರನ್ನು ಕೆರಳಿಸಿದೆ.
ಬಂದರು ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದರಿಗೆ ಸಂಪರ್ಕ ಕಲ್ಪಿಸಲು 4 ಕಿಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಅದಕ್ಕೆ ಸುಮಾರು 350 ಕುಟುಂಬಗಳು ನಿರಾಶ್ರಿತವಾಗುವ ಆತಂಕವಿದೆ. ಮುಂದೆ ಬಂದರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಇದ್ದು, ಅದಕ್ಕೆ 250 ಕುಟುಂಬಗಳು ನಿರಾಶ್ರಿತವಾಗುವ ಸಾಧ್ಯತೆ ಇದೆ. ಇದು ಮೀನುಗಾರ ಕುಟುಂಬದ ನಿದ್ದೆಗೆಡಿಸಿದೆ.
ಬಂದರು ಸಂಪರ್ಕಕ್ಕೆ ರಸ್ತೆ ಮಾಡಲಾಗುತ್ತಿರುವ ಸ್ಥಳ ಆಮೆ ಮೊಟ್ಟೆ ಇಡುವ ಸ್ಥಳ ಎಂದು ಅರಣ್ಯ ಇಲಾಖೆ ಗುರುತಿಸಿದೆ. ಖಾಸಗಿ ಕಂಪನಿ ರಸ್ತೆಗಾಗಿ ಮಣ್ಣು, ಕಲ್ಲು ಹಾಕಿ, ಆಮೆ ಮೊಟ್ಟೆ ಇಡುವ ಜಾಗವನ್ನು ನಾಶ ಮಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನು ಓದಿ : ಹೊನ್ನಾವರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ.