ಕುಮಟಾ : ಆರೋಗ್ಯಕ್ಕೆ ಹಾನಿಕರವಾಗಿರುವ ಚಿಕನ್ ಮಸಲಾವೊಂದನ್ನ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತ್ತೀಚಿಗೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಎವರೆಸ್ಟ್ ಚಿಕನ್ ಮಸಾಲಾ (Everest Chicken Masala) ಮಾದರಿ ಪರೀಕ್ಷೆ ವೇಳೆ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ.
ಮೆಣಸಿನಪುಡಿಗೆ ಬಳಸುವ ಕೀಟನಾಶಕವಾದ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಅಧಿಕವಾಗಿದೆ. ಸಾಮಾನ್ಯವಾಗಿ ಮಸಾಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದೆ ಎಂದು ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಹೇಳಿದ್ದಾರೆ.
ಎವರೆಸ್ಟ್ ಚಿಕನ್ ಮಸಾಲದಲ್ಲಿ ಇರುವ ಎಥಿಲಿನ್ ಆಕ್ಸೈಡ್ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಮನುಷ್ಯರ ಪರಿಣಾಮ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಎವರೆಸ್ಟ್ ಚಿಕನ್ ಮಸಾಲಾ ಮಾರಾಟ ಮಾಡದಂತೆ ಸೂಚಿಸಿದ್ದಾರೆ.
ಎವರೆಸ್ಟ್ ಚಿಕನ್ ಮಸಾಲಾ ಬಗ್ಗೆ ಸಂಶಯ ಇದ್ದುದರಿಂದ ಆಹಾರ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಪರೀಕ್ಷೆ ಮಾಡಲಾಗಿತ್ತು. ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಜಾಸ್ತಿಯಿದೆ. ಹೀಗಾಗಿ ಸಾರ್ವಜನಿಕರು ಯಾರು ಕೂಡ ಬಳಸಬಾರದು ಎಂದಿದ್ದಾರೆ. ಎವರೆಸ್ಟ್ ಮಸಾಲಾ ಕಂಪನಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ. ಎವರೆಸ್ಟ್ ಚಿಕನ್ ಮಸಾಲಾ ಪಾಕೆಟ್ ಸರಬರಾಜು ನಿಲ್ಲಿಸಬೇಕು. ಅಂಗಡಿಗಳಿಗೆ ಪೂರೈಸಿದ್ದ ಮಸಾಲವನ್ನ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಇಲ್ಲದಿದ್ದಲ್ಲಿ ಎವರೆಸ್ಟ್ ಚಿಕನ್ ಮಸಾಲಾ ಕಂಪನಿ ವಿರುದ್ಧ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದ್ದಾರೆ.
ಎವರೆಸ್ಟ್ ಚಿಕನ್ ಮಸಾಲಾ ಜೊತೆಗೆ ಇನ್ನೂ ಹಲವು ತರಹದ ಮಸಾಲಾ ಪುಡಿಗಳ ಮಾದರಿಯನ್ನ ತಪಾಸಣೆಗೆ ಕಳುಹಿಸಲಾಗಿದ್ದು ಪರೀಕ್ಷಾ ವರದಿ ಬರಬೇಕಾಗಿದೆ. ಚಿಕನ್ ಮಸಾಲಾ ಪೌಡರ್ ಬಳಸುವವರು ಆರೋಗ್ಯದ ದೃಷ್ಟಿಯಿಂದ ಇನ್ಮುಂದೆ ತಾವೇ ಮನೆಯಲ್ಲಿ ಮಾಡಿದ ಮಸಾಲಾ ಉಪಯೋಗಿಸೋದು ಸೂಕ್ತ. ಬಾಯಿ ರುಚಿಗೆ ಕಂಡಕಂಡ ಮಸಾಲಾ ಖರೀದಿಸಿದ್ರೆ ಯಾಮಾರದಂತೂ ಗ್ಯಾರಂಟಿ.