ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಗ್ರಾಮೀಣ ಭಕ್ತರ ಆರಾಧ್ಯ ದೈವ ಮಾರಿ ಜಾತ್ರೆಯು ಬುಧವಾರದಿಂದ ಆರಂಭಗೊಂಡಿದೆ. ಬೆಳಗ್ಗೆ 5.30ಕ್ಕೆ ಮಾರಿಯಮ್ಮ ಮೂರ್ತಿಯು ಮೆರವಣಿಗೆಯ ಮೂಲಕ ಬಂದು ಮಾರಿಕಾಂಬೆ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಮೊದಲ ಪೂಜೆ ಸಲ್ಲಿಸಿದರು.
ಜನತೆಯ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ ದೇವಿ ಎಂತಲೇ ಕರೆಸಿಕೊಳ್ಳುವ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಮಣ್ಕುಳಿಯ ಮಾರುತಿ ಆಚಾರಿಯವರ ಮನೆಯಿಂದ ಬೆಳಗಿನ ಜಾವ 5.15 ಹೊರಟು 5.30ಗಂಟೆಗೆ ಪೂಜಾ, ಪುನಸ್ಕಾರಗಳೊಂದಿಗೆ ಮೆರವಣಿಗೆಯಲ್ಲಿ ವೈಭವದಿಂದ ತಂದು ಮಾರಿಗುಡಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದರು.
ಬುಧವಾರ ಮುಂಜಾನೆಯಿಂದಲೇ ದೂರ ದೂರದ ಊರಿನಿಂದ ಬಂದಿರುವ ಭಕ್ತರು ಮಾರಿಯಮ್ಮನಿಗೆ ಪೂಜೆ, ಹರಕೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಕೂಡಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಭಕ್ತರನ್ನು ಸೆಳೆಯುತ್ತಿದೆ.
ಈ ಹಿಂದೆ ಮಾರಿಯಮ್ಮನಿಗೆ ತಮ್ಮ ಸಂಕಷ್ಟ ನಿವಾರಣೆಯಾದರೆ ಕುರಿ ಕೋಳಿಗಳನ್ನು ಬಲಿ ಕೊಡುತ್ತೇನೆ ಎಂದು ಹರಕೆ ಹೊತ್ತ ಭಕ್ತರು ಮಾರಿ ಗುಡಿಯ ಮುಂದೆ ಇದ್ದ ಬನದಲ್ಲಿ ಕುರಿ ಕೋಳಿಗಳನ್ನು ಬಲಿ ಕೊಡುವ ಪದ್ದತಿ ರೂಢಿಯಲ್ಲಿತ್ತಂತೆ. ಆದರೀಗ ಬಲಿ ಕೊಡುವ ಪದ್ಧತಿ ಇಲ್ಲ.
ಹೀಗಾಗಿ ಭಕ್ತರು ಮಾರಿಯಮ್ಮನಿಗೆ ಹೂವು ಹಣ್ಣು, ಬೆಳ್ಳಿಯ ಕಣ್ಣು, ಹಸಿರು ಬಳೆ, ಉಡಿ, ಸೀರೆ, ಬಣ್ಣ ಬಳಿಯುವುದು, ಹೂವಿನ ಟೋಪಿ ಮುಂತಾದ ಸೇವೆಗಳನ್ನು ಒಪ್ಪಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಜಾತ್ರೆಯ ಮೊದಲ ದಿನ ದೂರದೂರದ ಊರಿನವರು ಆಚರಿಸಿದರೆ, ಎರನೇ ದಿನ ಹತ್ತಿರದ ಗ್ರಾಮಗಳ ನಾಗರಿಕರು ಹಬ್ಬ ಆಚರಿಸುತ್ತಾರೆ. ಗುರುವಾರ ಮಧ್ಯಾಹ್ನ 4.30ಕ್ಕೆ ಮಾರಿ ಮೂರ್ತಿಯನ್ನು ವಾಹನದಲ್ಲಿ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಜಾತ್ರೆ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಭಟ್ಕಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ದೇವಸ್ಥಾನ ಸುತ್ತಮುತ್ತಲು ತಪಾಸಣೆ ನಡೆಸಲಾಗಿದ್ದು, ದೇವಿಯ ದರ್ಶನಕ್ಕೆ ಬಂದಂತಹ ಭಕ್ತರ ತಪಾಸಣೆ ಕೂಡ ನಡೆಸಲಾಗಿದೆ.
ಇದನ್ನು ಓದಿ : ಮದುವೆಯಾದ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ. ನ್ಯಾಯಮೂರ್ತಿಗಳೆ ಶಾಕ್.
ಧರ್ಮಸ್ಥಳ ಪ್ರಕರಣದ ತನಿಖೆಗೆ ಉತ್ತರಕನ್ನಡ ಜಿಲ್ಲೆಯ ಸೇರಿ 20 ಖಡಕ್ ಅಧಿಕಾರಿಗಳು.