ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಸೌಹಾರ್ದ ಹೆಸರಿಟ್ಟು ಕೋ ಆಪರೇಟಿವ್ ಬ್ಯಾಂಕ್ ಗಳು ಸಾಲಗಾರರನ್ನ ಜೈಲಿಗೆ ಕಳಿಸುತ್ತಿದೆ ಎಂದು ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಹಕಾರಿ ಸಂಘ ಮತ್ತು ಹಣಕಾಸು ಸಂಸ್ಥೆಗಳ ವಿರುದ್ದ ಸಂಘವು ಕಿಡಿಕಾರಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ಗಣಪತಿ ಮಾತನಾಡಿ, ರಾಜ್ಯದೆಲ್ಲೆಡೆ ಬಡಸಾಲಗಾರರು ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಹಕಾರಿ ಸಂಘಗಳು ಮತ್ತು ಕೆಲವೊಂದು ಹಣಕಾಸು ಸಂಸ್ಥೆಗಳು ಸಹಕಾರಿ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದು, ಈ ಕಾರಣದಿಂದಾಗಿ ಬಡಸಾಲಗಾರರು ಕಷ್ಟಪಟ್ಟು ದುಡಿದು ಬಡ್ಡಿ ಸಹಿತ ಸಾಲ ತೀರಿಸುವ ಪ್ರಯತ್ನದಲ್ಲಿದ್ದರೂ, ಸಾಲ ತೀರದಂತೆ ಬಾಕಿ ಉಳಿಯುವಂತಾಗಿದೆ ಎಂದರು.
“ಹೆಚ್ಚು ಮಂದಿ ಸಾಲಗಾರರು ತಮ್ಮ ಸಾಲ ತೀರಿಸಿದ್ದರೂ ಅವರ ಹೆಸರಿನಲ್ಲಿ ಕೋರ್ಟ್ ವಾರಂಟ್ ಹೊರಡಿಸಲಾಗುತ್ತಿದೆ. ಕೆಲವರು ಜೈಲಿನಲ್ಲಿ ಇದ್ದಾರೆ. ಜೊತೆಗೆ ಕೆಲ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರ ಹಣ ಲೂಟಿಯಾಗಿರುವ ಘಟನೆಗಳು ನಡೆದಿವೆ. ಇದರಿಂದಾಗಿ ನೂರಾರು ಸಾಲಗಾರರು ನಿತ್ಯ ಜೀವಭೀತಿಯಲ್ಲಿ ದಿನಕಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಕುಮಟಾ, ಗೋಕರ್ಣ, ಕಾರವಾರ, ಶಿರಸಿ, ಮುಂಡಗೋಡ ತಾಲೂಕಿನ ನೂರಾರು ಸಾಲಗಾರರ ಸಮಸ್ಯೆ ಪರಿಹರಿಸಿದ್ದು, ಕೆಲವು ಸಂದರ್ಭಗಳಲ್ಲಿ ಧನಸಹಾಯ ಮಾಡಿ ಜೈಲು ತಪ್ಪಿಸಲು ಸಹಾಯ ಮಾಡಿದ್ದೇವೆ ಎಂದು ಹೇಳಿದರು.
“ಬ್ಯಾಂಕುಗಳು ಸಾಲಗಾರರ ಮೇಲೆ ಹಾಕಿದ ಕೇಸುಗಳನ್ನು ಹಿಂಪಡೆದು, ಸಾಲಗಾರರಿಗೆ ರಕ್ಷಣೆ ನೀಡಬೇಕಾಗಿದೆ. ಸಮಸ್ಯೆ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಲು ಸಂಘ ಯೋಜಿಸಿದೆ ಎಂದ ಗಣಪತಿ ನಾಯ್ಕ ಸಹಕಾರಿ ಇಲಾಖೆಯ ಸಹಕಾರದಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
“ಸಾಲಕ್ಕೆ ಸಾವೇ ಪರಿಹಾರವಲ್ಲ. ಬದುಕಿ ಹೋರಾಡಿ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಭಟ್ಕಳದ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಸಂದೇಶ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ ಡಿ ನಾಯ್ಕ ಮಾರುಕೇರಿ, ಸಂಜೀವ ನಾಯ್ಕ ಮುರ್ಡೇಶ್ವರ, ಶಂಕರ ನಾಯ್ಕ, ವೆಂಕಟೇಶ ನಾಯ್ಕ ಚೌಥನಿ, ಸತೀಶ ಆಚಾರ್ಯ, ಕೃಷ್ಣಾ ನಾಯ್ಕ, ಗಜಾನನ ಆಚಾರಿ ಸೇರಿದಂತೆ ಇದ್ದರು.
ಇದನ್ನು ಓದಿ : ಭಟ್ಕಳ ಸಮೀಪದ ಕಡಲಲ್ಲಿ ಸಾಂಪ್ರದಾಯಿಕ ದೋಣಿ ಪಲ್ಟಿ. ನಾಲ್ವರು ಕಣ್ಮರೆ.
ಕಾರವಾರದಲ್ಲಿ ಕೊಂಕಣ ರೈಲ್ವೆ ನೂತನ ಟ್ರಾಕ್ಷನ್ ಸಬ್ಸ್ಟೇಷನ್ ಕಾರ್ಯಾರಂಭ.
	
						
							
			
			
			
			
