ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬರುವ ಗಣೇಶ ಚತುರ್ಥಿ ಹಬ್ಬ(Ganesha Chaturthi Festival) ಮತ್ತು ಈದ್ ಮಿಲಾದ್(Eid Milad) ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ(DC K Lakshmipriya) ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ವ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು, ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ನೋಡಿಕೊಳ್ಳಬೇಕೆಂದ ಅವರು, ಪೆಂಡಾಲ್ ಗಳ ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ತಿಳಿಸಿದರು.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮತ್ತು ಪ್ರತಿಷ್ಠಾಪನೆ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗಳ ಸಂಪರ್ಕದಿಂದ ಯಾವುದೇ ಅನಾಹುತಗಳಾಗದಂತೆ ಹೆಸ್ಕಾಂ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಬಗ್ಗೆ ಆಯೋಜಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಗಣೇಶ ಮೂರ್ತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು, ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪತ್ತಿಯಾಗದಂತೆ ಸ್ಥಳೀಯಾಡಳಿತಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸಿಂಗಲ್ ವಿಂಡೋ ವ್ಯವಸ್ಥೆಯಡಿ(Single Window Syastem) ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯುವಂತೆ ತಿಳಿಸಿದರು.
ನಿಗಧಿಗಿಂತ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ, ಸುಪ್ರೀಂಕೋರ್ಟ್(Supremcourt) ಸೂಚನೆಯಂತೆ ಡಿಜೆಗಳ ಬಳಕೆಯನ್ನು ಮಾಡುವಂತಿಲ್ಲ. ಆಸ್ಪತ್ರೆ, ಶಾಲೆ, ನ್ಯಾಯಾಲಯ ಇರುವ ಪ್ರದೇಶದಲ್ಲಿ ಧ್ವನಿವರ್ಧಕ ಬಳಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ 9483511015 ಮತ್ತು ಪೊಲೀಸ್ ಸಹಾಯವಾಣಿ 112 ನ್ನು 24*7 ಸಂಪರ್ಕಿಸಬಹುದು ಎಂದರು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು, ಬೆಂಕಿ ಅವಗಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘನೆ ಮತ್ತು ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಅಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದರು.
ಸಭೆಯಲ್ಲಿ ಡಿಜೆಗಳ ಬಳಕೆಯ ಪರ ಮತ್ತು ವಿರೋಧದ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐಎಎಸ್ ಅಧಿಕಾರಿ ಜೂಫಿಶಾನ್ ಹಕ್, ಎ ಎಸ್ಪಿಗಳಾದ ಕೃಷ್ಣಮೂರ್ತಿ, ದೇವರಾಜ್ , ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಸಮುದಾಯದ ಮುಖಂಡರು ಹಾಗೂ ಪ್ರತಿನಿಧಿಗಳು ಇದ್ದರು.
ಇದನ್ನು ಓದಿ : ಖಾಸಗಿ ಪೋಟೋ ಇದೆಯೆಂದು ಲಕ್ಷಲಕ್ಷ ಪೀಕಲು ಮುಂದಾದ ಮೂವರು ಆರೆಸ್ಟ್.