ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಇಂದು (ಸೆಪ್ಟೆಂಬರ್ 7) ರಾತ್ರಿ ಖಗೋಳದ ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ(Lunar Eclipse) ಜರುಗಲಿದೆ. ಪೂರ್ಣ ಚಂದಿರ ತಾಮ್ರ ಅಥವಾ ರಕ್ತವರ್ಣದಲ್ಲಿ ಕಾಣಿಸಲಿದ್ದಾನೆ.
ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ. ಸೆ.7ರಂದು ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭವಾಗಿ, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗುತ್ತದೆ. ಆದರೆ, ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲೇ ಕೆಂಪು ಚಂದಿರನನ್ನು ಕಾಣಬಹುದಾಗಿದೆ. ಗ್ರಹಣ(Eclipse) ತಡರಾತ್ರಿ 1.26ಕ್ಕೆ ಮುಕ್ತಾಯಗೊಳ್ಳಲಿದೆ. ಭಾರತದ ಎಲ್ಲೆಡೆ ಈ ಗ್ರಹಣ ಕಾಣಿಸುತ್ತದೆ.
ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತ ವರ್ಣದ ಆಕಾಶಕಾಯವಾಗಿ ಗೋಚರಿಸುತ್ತದೆ. ಆದರೆ ಮಳೆಯ ಕಾರಣಕ್ಕೆ ಏನಾದರೂ ಮೋಡ ಬಂದರೆ ಗ್ರಹಣ ವೀಕ್ಷಣೆಗೆ ತೊಂದರೆಯಾಗಬಹುದು.
ಚಂದ್ರನು ಭೂಮಿಯ ಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ ಸೂರ್ಯನಿಂದ ಭೂಮಿಯ ಹಿಂಬದಿ ಬಂದಾಗ ಚಂದ್ರಗ್ರಹಣವಾಗಲಿದೆ. ಚಂದ್ರನು ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಇಂದು ಸೆ.7 ರಂದು ಹುಣ್ಣಿಮೆ ರಾತ್ರಿ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಭಾರತದ ಎಲ್ಲ ಭಾಗಗಳಿಂದ ಈ ಖಗೋಳ ವಿದ್ಯಮಾನ ವೀಕ್ಷಿಸಬಹುದಾಗಿದೆ.
ನಮ್ಮಭಾರತ ದೇಶ ಸೇರಿ ಸಿಂಗಾಪುರ, ಶ್ರೀಲಂಕಾ, ಚೀನಾ, ಮಂಗೋಲಿಯಾ, ರಷ್ಯಾದ ಕೇಂದ್ರ ಭಾಗ, ಮಲೇಷಿಯಾ, ಇಂಡೋನೇಷಿಯಾ, ಏಷ್ಯಾ ಖಂಡದ ವಿವಿಧ ದೇಶಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್ ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿಯೂ ಗ್ರಹಣ ಗೋಚರಿಸುತ್ತದೆ.
ಇದನ್ನು ಓದಿ : ಭಾವನಾ ರಾಮಣ್ಣಗೆ ಹೆಣ್ಣು ಮಗು. ಐವಿಎಫ್ ಮೂಲಕ ಮಗು ಪಡೆದ ನಟಿ.
ಅಂಕೋಲಾದಲ್ಲಿ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ನಾಪತ್ತೆಯಾದ ಹುಡುಗ. ಮದುವೆಯಾಗಿ ಠಾಣೆಯಲ್ಲಿ ಪ್ರತ್ಯಕ್ಷ.