ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಪಟ್ಟಣದ ಗಿಬ್ ಸರ್ಕಲ್(GiB Circle) ಬಳಿಯ ಬ್ಯಾಟರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವೈದ್ಯಕೀಯ ಪರೀಕ್ಷೆ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದವನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಭಟ್ಕಳ ಮೂಲದ(Bhatkal Native) ಕುಖ್ಯಾತ ಕಳ್ಳ ಫೌಜಾನ್ ಅಹ್ಮದ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮೂರು ದಿನಗಳ ಕಾರ್ಯಾಚರಣೆಯಲ್ಲಿ  ಅಪರಾಧ ವಿಭಾಗದ ಪಿಎಸ್ಐ ಮಯೂರ ಪಟ್ಟಣ ಶೆಟ್ಟಿ ತಂಡ, ಮಂಡ್ಯ ಜಿಲ್ಲೆಯ ಮದ್ದೂರು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಆರೋಪಿಯನ್ನ ಎಡೆಮುರಿ ಕಟ್ಟಿ ವಶಕ್ಕೆ ಪಡೆದುಕೊಂಡಿದೆ.

ಬ್ಯಾಟರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಫೌಜಾನ್ ಅಹ್ಮದ್,  ಭಟ್ಕಳದ ಬದ್ರಿಯಾ ಕಾಲೋನಿ ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಕೇವಲ 24 ಗಂಟೆಗೂ ಒಳಗಾಗಿ ಶಿರಸಿಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರು ಮಾಡುವ ಮೊದಲು, ಶುಕ್ರವಾರ ರಾತ್ರಿ ಆರೋಪಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ವಾಪಸ್ ತೆರಳುವ ಸಂದರ್ಭದಲ್ಲಿ, ಕರ್ತವ್ಯ ನಿರತ ಸಿಬ್ಬಂದಿ ಅಜಾಗರೂಕತೆಯಿಂದ ಫೌಜಾನ್ ಕಾಂಪೌಂಡ್ ಹಾರಿ ಕತ್ತಲಿನಲ್ಲಿ ಪರಾರಿಯಾಗಿದ್ದ.

ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್ಐ ಮಯೂರ ಪಟ್ಟಣಶೆಟ್ಟಿ ಜೊತೆಗೆ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಚಿದಾನಂದ ನಾಯ್ಕ ಮತ್ತು ಕಿರಣ ನಾಯ್ಕ ಕಾರ್ಯಾಚರಣೆ ನಡೆಸಿದ್ದರು.  ಆರೋಪಿ ಬಳಕೆ ಮಾಡಿದ ಮೊಬೈಲ್‌ ಫೋನ್ ಲೊಕೇಶನ್ ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ, ಆತ ಮಂಡ್ಯ ಜಿಲ್ಲೆಯ ಮದ್ದೂರು ಪ್ರದೇಶದಲ್ಲಿ ಅಡಗಿಕೊಂಡಿರುವುದು ಗೊತ್ತಾಗಿತ್ತು.

ಅರೋಪಿ ಪೌಜಾನ್ ಅಹ್ಮದ್, ಪ್ರೀತಿಸುತ್ತಿದ್ದ ಯುವತಿಯೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದರೂ, ಪೊಲೀಸರು ಬಂಧಿಸುವ ಸನ್ನಾಹದಲ್ಲಿದ್ದಾರೆಂದು ಅನುಮಾನಗೊಂಡ ಫೌಜಾನ್ ನಿಶ್ಚಿತಾರ್ಥವನ್ನು ರದ್ದುಮಾಡಿದ್ದ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲಿಗೆ ಗುಪ್ತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡ ಆರೋಪಿ ಫೌಜಾನ್ ಅಹ್ಮದನ್ನು ಎಡೆಮುರಿ ಕಟ್ಟಿ ವಶಕ್ಕೆ ಪಡೆದಿದೆ. ನಂತರ ಕುಮಟಾಕ್ಕೆ ಕರೆತಂದು ಕಳ್ಳತನ ಮತ್ತು ಕರ್ತವ್ಯ ನಿರತ ಪೊಲೀಸರ ಕೈಯಿಂದ ಪರಾರಿಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಫೌಜಾನ್ ವಿರುದ್ಧ ಬೈಂದೂರು, ಭಟ್ಕಳ, ಬೇಲೂರು ಸೇರಿ ಹಲವು ಕಡೆ ಕಾರು ಕಳ್ಳತನ, ಬೈಕ್ ಕಳ್ಳತನ, ಪಂಪ್‌ಸೆಟ್ ಮತ್ತು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ  ಬೇಲೂರಿಗೆ ತೆರಳಿ ಅಲ್ಲಿ ಮನೆ ಕಳ್ಳತನ ಮಾಡಿ ರಿಡ್ಚ್ ಕಾರು ಕದ್ದ ಪ್ರಕರಣದಲ್ಲೂ ಅವನ ಕೈವಾಡವಿದೆ ಎನ್ನಲಾಗುತ್ತಿದೆ. ಜಾಮೀನು ಮೇಲೆ ಹೊರಬಂದ ಬಳಿಕವೂ ಆತ ಮತ್ತೆ ಕಳವುಗಳಲ್ಲಿ ತೊಡಗಿದ್ದಾನೆಂಬುದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ಇದನ್ನು ಓದಿ : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸತೀಶ್ ಸೈಲ್