ದಾಂಡೇಲಿ : ಭಾನುವಾರ ನಸುಕಿನ ಜಾವ ನಗರದ ಟೌನಶಿಪ್’ ಪ್ರದೇಶದ ಮನೆಯೊಂದರಲ್ಲಿ ಕಳ್ಳತನ   ನಡೆದಿದೆ.

  ಲಲಿತಾ ಮೇಧಾ ಮತ್ತು ಅವರ ಪುತ್ರ ನಾಗರಾಜ್ ಮೇಧಾ ಅವರು ಬಾಡಿಗೆದಾರರಾಗಿ ವಾಸ್ತವ್ಯವಿದ್ದ ಮನೆ ಕಳ್ಳತನವಾಗಿದೆ.  ಶನಿವಾರ ಮನೆಯವರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು.  ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು  ಮನೆಯ ಹಿಂಭಾಗದ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ್ದಾರೆ. ಮನೆಯ ಒಳಗಡೆಯಿದ್ದ ಕಪಾಟಿನ ಬಾಗಿಲು ಮುರಿದು ಕಪಾಟಿನಲ್ಲಿದ್ದ ಚಿನ್ನದ ಒಡವೆ ಹಾಗೂ ನಗದನ್ನು ದೋಚಿದ್ದಾರೆ.

ಬೆಳಿಗ್ಗೆ ಎಂದಿನಂತೆ ಮನೆಗೆ ಮನೆ ಕೆಲಸದವರು ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲು ತೆರೆದಿತ್ತು. ತಕ್ಷಣ ನಾಗರಾಜ  ಅವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ನಾಗರಾಜ ಮೇಧಾ ಅವರು ಕೂಡಲೇ ಅವರ ಸಹೋದರರಾದ ಅದೇ ವಾರ್ಡಿನಲ್ಲಿ ವಾಸವಿರುವ ಅನಿಲ್ ಕೃಷ್ಣ ಮೇಧಾ ಅವರಿಗೆ ವಿಷಯವನ್ನು ತಿಳಿಸಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ. ಅನಿಲ್ ಕೃಷ್ಣ ಮೇಧಾ ಅವರು ತಕ್ಷಣವೇ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. 

ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ಗಳಾದ ಐ.ಆರ್ ಗಡ್ಡೆಕರ್, ರವೀಂದ್ರ ಬಿರದಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.