ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) : ಗೋಕರ್ಣ(Gokarn): ಇಲ್ಲಿನ ಪ್ರಸಿದ್ಧ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಬಂದು ಪರ್ಸ್ ಕಳ್ಳತನ ಮಾಡಿದ್ದ ಅಂತರಜಿಲ್ಲಾ ಮಹಿಳಾ ಕಳ್ಳಿಯರ(Women Theieves) ಗ್ಯಾಂಗ್ ಅನ್ನು ಗೋಕರ್ಣ ಪೊಲೀಸರು(Gokarn Police) ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ(Banglore) ವಕೀಲೆ ಮಂಜುಳಾ ರಾವಸಾಹೇಬ್ ಶಿಂಧೆ ಎಂಬುವವರ ಪರ್ಸ್ ಅನ್ನು ಈ ಖದೀಮ ಮಹಿಳೆಯರು ಕದ್ದಿದ್ದರು. ಈ ಕುರಿತು ಸಂತ್ರಸ್ತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ನಾಲ್ವರು ಮಹಿಳೆಯರು ಗದಗ(Gadag) ಜಿಲ್ಲೆಯ ಬೆಟಗೇರಿ ಗಾಂಧಿನಗರದ ಒಂದೇ ಗ್ಯಾಂಗ್‌ಗೆ ಸೇರಿದವರಾಗಿದ್ದಾರೆ. ಭೀಮವ್ವ ಹನುಮಂತಪ್ಪ ಮುತಗಾರ, ಶಾಂತಾ ರಾಮಪ್ಪ ಮುತಗಾರ, ಶೋಭಾ ರಾಮಪ್ಪ ಮುತಗಾರ, ಕುಮಾರಿ ಮಾರುತಿ ಮುತಗಾರ ಬಂಧಿತರಾಗಿದ್ದಾರೆ.

ಪಿಕ್‌ಪಾಕೆಟ್ ದಂಧೆ: ಬಂಧಿತ ಮಹಿಳಾ ಗ್ಯಾಂಗ್ ಕೇವಲ ಗೋಕರ್ಣ(Gokarn) ಮಾತ್ರವಲ್ಲದೆ, ರಾಜ್ಯದ ವಿವಿಧ ಪ್ರಸಿದ್ಧ ದೇವಾಲಯಗಳು ಹಾಗೂ ಹೊರರಾಜ್ಯಗಳಲ್ಲೂ ಭಕ್ತರ ಸೋಗಿನಲ್ಲಿ ಓಡಾಡಿ ಪಿಕ್‌ಪಾಕೆಟ್ ಮತ್ತು ಕಳ್ಳತನ ಮಾಡುತ್ತಿದ್ದ ಆಂತರಿಕ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರ ಚುರುಕಿನ ಕಾರ್ಯಾಚರಣೆ: ದೂರು ದಾಖಲಾದ ಬೆನ್ನಲ್ಲೇ ಗೋಕರ್ಣ ಕ್ರೈಂ ಪಿಎಸ್‌ಐ ಸುನಿಲ್ ಅವರ ನೇತೃತ್ವದ ಪೊಲೀಸ್ ತಂಡವು ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿ, 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರದಲ್ಲಿ ನಡೆದ ಈ ಅಪರಾಧವನ್ನು ತ್ವರಿತವಾಗಿ ಭೇದಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.