ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ​ಕಾರವಾರ(Karwar): ಸಮಯಪ್ರಜ್ಞೆ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರ ಜೀವವನ್ನು ಕಾಪಾಡಿರುವ ಘಟನೆ ಕಾರವಾರದಲ್ಲಿ(Karwar) ನಡೆದಿದೆ.

​ಮಲ್ಲಾಪುರ(Mallapur) ಪೊಲೀಸ್ ಠಾಣೆಯ ಸಿ.ಹೆಚ್.ಸಿ.-1453 ಸಾಯಿನಂದ ವಿ. ನಾಯ್ಕ ಅವರು 112-ಇ.ಆರ್.ಎಸ್.ಎಸ್. ಕರ್ತವ್ಯಕ್ಕಾಗಿ ಮಲ್ಲಾಪುರದಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ, ಕೋಡಿಭಾಗ ಸೇತುವೆಯ(Kodibhag) ಮೇಲಿಂದ ಮಹಿಳೆಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಅವರು ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದ್ದು, ಸಾರ್ವಜನಿಕರ ಸಹಾಯದಿಂದ ಮಹಿಳೆಯನ್ನು ಸುರಕ್ಷಿತವಾಗಿ ಕೆಳಗೆಳಿಸಿ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ.

​ನಂತರ ಸ್ಥಳಕ್ಕೆ ಆಗಮಿಸಿದ 112-ಇ.ಆರ್.ಎಸ್.ಎಸ್. ಸಿಬ್ಬಂದಿಯಾದ ಎ.ಹೆಚ್.ಸಿ.-383 ದಿನೇಶ ನಾಗೇಕರ ಹಾಗೂ ಸಾಯಿನಂದ ವಿ. ನಾಯ್ಕ ಅವರು ಸೇತುವೆ ಮೇಲಿದ್ದ ಜನರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ, ನೊಂದ ಮಹಿಳೆಯನ್ನು 112 ವಾಹನದ ಮೂಲಕ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

​ಅಮೂಲ್ಯ ಜೀವವೊಂದನ್ನು ಉಳಿಸಲು ಶ್ರಮಿಸಿದ ಸಾಯಿನಂದ ವಿ. ನಾಯ್ಕ ಹಾಗೂ ದಿನೇಶ ನಾಗೇಕರ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯ ಕಾಳಜಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು(Uttarkannada District Police Department) ಶ್ಲಾಘಿಸಿ, ಅಭಿನಂದಿಸಿದೆ.