ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ​ಕಾರವಾರ(Karwar): ​ದೀಪಾವಳಿ ಹಬ್ಬದ ಸಡಗರದ ನಡುವೆ ನಗರಸಭೆಯ ಪೌರ ಕಾರ್ಮಿಕರು(CMC Labours) ತಮಗೆ ಸಿಕ್ಕ ಚಿನ್ನದ ಓಲೆಯನ್ನು ವಾರಸುದಾರರಿಗೆ ಸುರಕ್ಷಿತವಾಗಿ ಮರಳಿಸುವ ಮೂಲಕ ಮಾನವೀಯತೆ ಹಾಗೂ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ದೀಪಾವಳಿ ಹಬ್ಬದ(Deepavali Festival) ಪೂಜೆ ಮುಗಿದ ನಂತರ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳಸವಾಡ ಪ್ರದೇಶದಲ್ಲಿ ಮನೆ ಮನೆ ಕಸ ಸಂಗ್ರಹಿಸುತ್ತಿದ್ದ ವೇಳೆ, ಕವಿತಾ ಗಣೇಶ್ ನಾಯಿಕ್ ಎಂಬುವರು ಕಣ್ತಪ್ಪಿನಿಂದ ತಮ್ಮ ಕಿವಿಯ ಚಿನ್ನದ ಓಲೆಯನ್ನು ತ್ಯಾಜ್ಯದ ಜೊತೆಗೆ ಹಾಕಿದ್ದರು.

​ನಂತರ ಸಂಗ್ರಹಿಸಿದ ತ್ಯಾಜ್ಯವನ್ನು ನೆಲಬರ್ತಿ ಜಾಗದಲ್ಲಿ ವಿಂಗಡಣೆ (ಬೇರ್ಪಡಿಸುವ) ಮಾಡುವಾಗ, ಕಸ ಸಂಗ್ರಹಣೆ ವಾಹನದ ಚಾಲಕ ಅರುಣ ವಿಟ್ಟಲ್ ಹರಿಜನ್ ಹಾಗೂ ಸಹಾಯಕ ಮದನ್ ನಾಯಕ್ ಅವರಿಗೆ ಈ ಚಿನ್ನದ ಓಲೆ ಸಿಕ್ಕಿದೆ. ತಕ್ಷಣ ಜಾಗರೂಕರಾದ ಸಿಬ್ಬಂದಿ ಅದನ್ನು ಭದ್ರವಾಗಿ ಎತ್ತಿಟ್ಟುಕೊಂಡಿದ್ದಾರೆ.

​ಬಳಿಕ, ಓಲೆ ಕಳೆದುಕೊಂಡ ವಾರಸುದಾರರಾದ ಕವಿತಾ ಗಣೇಶ್ ನಾಯಿಕ್ ಅವರದ್ದಾಗಿರಬಹುದು ಎಂದು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಇಬ್ಬರೂ ಸಿಬ್ಬಂದಿ ಅವರಿಗೆ ಚಿನ್ನದ ಓಲೆಯನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

​ತ್ಯಾಜ್ಯದ ರಾಶಿಯಲ್ಲೂ ಪ್ರಾಮಾಣಿಕತೆ ಮೆರೆದು, ಕಳೆದುಹೋದ ಬೆಲೆಬಾಳುವ ಆಭರಣವನ್ನು ಮರಳಿ ತಲುಪಿಸಿದ ಅರುಣ ವಿಟ್ಟಲ್ ಹರಿಜನ್ ಹಾಗೂ ಮದನ್ ನಾಯಕ್ ಅವರ ಈ ಸತ್ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಹಾಗೂ ನಗರಸಭೆಯಿಂದ ವ್ಯಾಪಕ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತವಾಗಿದೆ.