ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ನಗರದ ಪಟೇಲ್ ಸರ್ಕಲ್ ಬಳಿಯ ಜಿ.ಎನ್. ರಸ್ತೆಯಲ್ಲಿರುವ ಎಸ್.ಕೆ. ಏಜೆನ್ಸಿ ಅಂಗಡಿಯಲ್ಲಿ ಮಾದಕ ಅಂಶ(Drugs Content) ಹೊಂದಿರುವ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ(NDPS Act) ಪ್ರಕರಣ ದಾಖಲಿಸಿದ್ದಾರೆ.

ದಾಂಡೇಲಿ ನಗರ(Dandeli Town) ಪಿ.ಎಸ್.ಐ ಕಿರಣ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಶನಿವಾರ ಈ ದಾಳಿ ನಡೆಸಲಾಯಿತು.

ದಾಳಿಯ ವೇಳೆ ಅಂಗಡಿಯಲ್ಲಿ “SANAN MEWA MODAK (SPECIAL)” ಎಂಬ ಹೆಸರಿನ ಉತ್ಪನ್ನದ ಪ್ಯಾಕೆಟ್‌ಗಳು ಪತ್ತೆಯಾದವು. ಆ ಪ್ಯಾಕೆಟ್‌ಗಳ ಮೇಲೆ ಕ್ಯಾನಬಿಸ್ ಸಟಿವಾ (‘Cannabis Sativa’) ಅಂಶ ಇರುವುದಾಗಿ ನಮೂದಿಸಲಾಗಿತ್ತು.

ಸ್ಥಳಕ್ಕೆ ಆಗಮಿಸಿದ ಸೊಕೊ ಅಧಿಕಾರಿಗಳು ಪ್ರಾಥಮಿಕ ಪರೀಕ್ಷಾ ಕಿಟ್ ಮೂಲಕ ಮಾದರಿಗಳನ್ನು ಪರೀಕ್ಷಿಸಿದಾಗ ಮಾದಕ ಅಂಶ ಇರುವುದು ಪ್ರಾಥಮಿಕವಾಗಿ ದೃಢಪಟ್ಟಿತು.

ಪೊಲೀಸರು ಒಟ್ಟು 10 ಬಾಕ್ಸ್‌ಗಳಲ್ಲಿದ್ದ ಸುಮಾರು 1 ಕೆ.ಜಿ. 986 ಗ್ರಾಂ ತೂಕದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಆರೋಪಿ ನಿರ್ಮಲನಗರದ ನಿವಾಸಿಯಾಗಿರುವ ಸಂಜಯ ಮುರಳೀಧರ ಮಹೇಶ್ವರಿ, (62) ಎಂಬುವವರ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ(Dandeli Town Police) ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಳಿಯನ್ನು ಪಿ.ಎಸ್.ಐ ಕಿರಣ ಪಾಟೀಲ ನೇತೃತ್ವದ ತಂಡ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪಿ.ಎಸ್.ಐ ಅಮೀನ್ ಅತ್ತಾರ್ ಅವರು ಕೈಗೊಂಡಿದ್ದಾರೆ.

ಈ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟದ ಜಾಲದಲ್ಲಿ ಇತರರು ಭಾಗಿಯಾಗಿರುವ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.