ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಉತ್ತರಕನ್ನಡ (Uttarkannada) ಜಿಲ್ಲೆಯ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ ಜಿಪ್ಲೈನ್ ಸಾಹಸ ಕ್ರೀಡೆ(Zipline Adventure Sports) ವೇಳೆ ಸಂಭವಿಸಿದ ಅವಘಡದಲ್ಲಿ ವಿಜಯಪುರ ಮೂಲದ(Vijayapur Native) ಯುವಕ ಕುಬೇರ್ ಸುರಪುರ ಗಂಭೀರವಾಗಿ ಗಾಯಗೊಂಡಿದ್ದು, ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಜಯಪುರ ನಗರದ ನಿವಾಸಿಯಾಗಿರುವ ಕುಬೇರ್ ಸುರಪುರ ಅವರು ಕಳೆದ ಜುಲೈ 3ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ಗೆ(Dandelion Sterling Resort) ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜಿಪ್ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾಗ, ಜಿಪ್ಲೈನ್ನ ಲಾಕ್ ಕಟ್ ಆಗಿ ಸುಮಾರು 30ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಹೋದರ ಪ್ರಶಾಂತ್ ಅವರ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಕುಬೇರ್ ಅವರ ಎರಡೂ ಕೈ ಹಾಗೂ ಎರಡೂ ಕಾಲಿನ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ. ಆರಂಭದಲ್ಲಿ ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ(Dandeli Government Hospital) ಚಿಕಿತ್ಸೆ ನೀಡಲಾಗಿದ್ದು, ನಂತರ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೂ ಕೈ ಮತ್ತು ಕಾಲುಗಳಿಗೆ ಹೆಚ್ಚುವರಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.
ಈ ಅವಘಡಕ್ಕೆ ಸ್ಟರ್ಲಿಂಗ್ ರಿವರ್ ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗಾಯಾಳುವಿನ ಕುಟುಂಬ ಆರೋಪಿಸಿದೆ. ಜಿಪ್ಲೈನ್ ಚಟುವಟಿಕೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತದ ಬಳಿಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ರೆಸಾರ್ಟ್ ನವರು ಭರವಸೆ ನೀಡಿದ್ದರು. ಆದರೆ ಬಳಿಕ ಚಿಕಿತ್ಸಾ ವೆಚ್ಚಕ್ಕೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದೇ ವೇಳೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಅಪಘಾತ ನಡೆದಿರುವುದನ್ನು ಒಪ್ಪಿಕೊಂಡಿದ್ದು, ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದಲ್ಲ, ಆಕಸ್ಮಿಕವಾಗಿ ಸಂಭವಿಸಿದ ಘಟನೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಗಾಯಾಳುವಿನ ಕುಟುಂಬದೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಎಂಜಾಯ್ ಮಾಡಲು ತೆರಳಿದ್ದ ಪ್ರವಾಸ ದುರಂತವಾಗಿ ಪರಿಣಮಿಸಿದ್ದು, ಗಂಭೀರ ಗಾಯಗಳಿಂದ ಯುವಕ ಈಗ ಹಾಸಿಗೆ ಹಿಡಿದಿರುವುದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದೆ.
