ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಗೊಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್(Bhatkal Rural Police) ಠಾಣೆಯವರು ಭೇದಿಸಿದ್ದಾರೆ, ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಬಿಳಲಖಂಡ ಗುಳ್ಮಿಯ ಮೊಹಮ್ಮದ್ ಸಾಧಿಕ್ ಶೇಖ (26), ಮೊಹಮ್ಮದ್ ಖಾಜಾ (20), ಮೂಸಾನಗರದ ಮೊಹಮ್ಮದ್ ಇರ್ಶಾದ್ (28), ಮೊಹಮ್ಮದ್ ಮುಸಾದಿಕ್ (36) ಬಂಧಿತರಾಗಿದ್ದಾರೆ. ಇನ್ನೋರ್ವ ಆರೋಪಿ ಹೆಬಳೆಯ ಮೊಹಮ್ಮದ್ ನಿಜಾಮ್ ಪರಾರಿಯಾಗಿದ್ದಾನೆ.
ಎರಡು ತಿಂಗಳ ಹಿಂದೆ ಸಾಧಿಕ್ ಶೇಖ ಮತ್ತು ಖಾಜಾ ಅವರು ಮಾರುಕೇರಿಯ ನಾಗಪ್ಪಯ್ಯ ಭಟ್ಟ ಅವರ ಹೊಸ ಮನೆಯ ಟೈಲ್ಸ್ ಹಾಕುವ ಕಾಮಗಾರಿ ನಡೆಸುತ್ತಿದ್ದಾಗ, ಪಕ್ಕದ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಬಳಿಕ ತಮ್ಮ ಸಹಚರರ ಸಹಾಯದಿಂದ ಕೆಲ ದಿನಗಳ ನಂತರ ಮಧ್ಯರಾತ್ರಿ ಆ ಮನೆಗೆ ನುಗ್ಗಿ ಅಡಿಕೆ ಚೀಲ ಕದ್ದು ಪರಾರಿಯಾಗಿದ್ದರು.
ಮನೆಯ ಮಾಲಿಕ ನಾಗಪ್ಪಯ್ಯ ಭಟ್ಟ ಅವರು ಜುಲೈನಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ(Bhatkal Rural Station) ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಅವರಿಂದ 175 ಕೆ.ಜಿ. ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪರಾರಿಯಾದ ಆರೋಪಿಯ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಮಂಜುನಾಥ ಎ. ಲಿಂಗಾರೆಡ್ಡಿ, ಎಎಸ್ಐ ಗಣಪತಿ ಬೆನಕಟ್ಟಿ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದನ್ನು ಓದಿ : ಭಟ್ಕಳದಲ್ಲಿ ಕಿಡಿಗೇಡಿ ಕೃತ್ಯ. ಬೈಕುಗಳಿಗೆ ಬೆಂಕಿ ಹಚ್ಚಿ ಪರಾರಿ.