ಕಾರವಾರ : ಅಂಕೋಲದ ಶಿರೂರುನಲ್ಲಿ ನಡೆದ ಭೂಕುಸಿತ ಪ್ರದೇಶಕ್ಕೆ   ಡಿ.ವೈ.ಎಫ್.ಐ  ಹಾಗೂ ಸಿ.ಐ.ಟಿ.ಯು. ಕಾರ್ಯಕರ್ತರು, ಮುಖಂಡರು ತೆರಳಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡಿದರು.

ಉಳುವರೆಯಿಂದಲೇ ಸ್ಥಳ ವೀಕ್ಷಿಸಿದ ಮುಖಂಡರು ಘಟನೆ ಬಗ್ಗೆ ಅಘಾತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ .ಐ.ಟಿ.ಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ,  ಇದೊಂದು ಘೋರ ದುರಂತ. ಈ ಘಟನೆಗೆ ಕಾರಣರಾದವರ ಮೇಲೆ ಸರಕಾರ ಕಠಿಣ ಕ್ರಮ ಜರುಗಿಸಬೇಕು. ಸಂತ್ರಸ್ಥರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಟ್ಟು ಮಕ್ಕಳ ವಿದ್ಯಾಭ್ಯಾಸದ ಖರ್ಚುಭರಿಸಿ, ಪ್ರತಿ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು. ಸರ್ಕಾರ ಅಗತ್ಯ ಪರಿಕರಗಳನ್ನ ಸಿದ್ಧತೆಯಲ್ಲಿರಿಸಿಕೊಳ್ಳಬೇಕೆಂದರು.

ಡಿ.ವೈ.ಎಪ್.ಐ.ನ ಮುಖಂಡ ರಾಜ್ಯ ಮುಖಂಡ ಡಿ.ಸ್ಯಾಮ್‌ಸನ್‌ ಮಾತನಾಡ ಗುಡ್ಡ ಕುಸಿತದಿಂದ 8 ಜನರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಘಟನೆ, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನಮ್ಮಿಂದಾದ ನೆರವು ನೀಡುವುದು ನಮ್ಮ ಕರ್ತವ್ಯವಾಗಿತ್ತು. ಸರಕಾರ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು.  ಮಣ್ಣಿನಡಿಯಲ್ಲಿ ಸಿಲುಕಿರುವ ಇನ್ನಿತರ ಶೋಧ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು  ಎಂದರು.

ಇದೆ ವೇಳೆ ಶಿರೂರಿನಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿರುವ ಕಾರ್ಮಿಕರಿಗೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಎಲ್ಲ ಶ್ರಮಿಕರಿಗೂ, ಲಾರಿ ಚಾಲಕರು ಹಾಗೂ ಕೇರಳದಿಂದ ಬಂದ ಜನರಿಗೂ ಸಂಘಟನೆಯವರು ನೆರವು ನೀಡಿದರು.

ಡಿ. ವೈ .ಎಫ್. ಐ. ನ ಮುಖಂಡರಾದ ಇಮ್ರಾನ ಖಾನ, ಸಲ್ಮಾನ ಇಲ್ಯೂರೀ, ಕಾಂತರಾವ, ಇರ್ಷಾದ ರಾಣಿಬೆನ್ನೂರು, ಮೊಹಮ್ಮದ್ ಗೌಸ, ವಿನೀತ್ ಹಾಗೂ ರೈತ ಕಾರ್ಮಿಕರ ಸಂಘದ ಮುಖಂಡರಾದ ಶಾಂತಾರಾಮ್ ನಾಯಕ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಇದ್ದರು.