ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ರಾಜ್ಯದಲ್ಲಿ ಅರಣ್ಯವಾಸಿಗಳ ಬದುಕು ತೂಗುಯ್ಯಾಲೆಯಲ್ಲಿದೆ. ಕಳೆದ 34 ವರ್ಷಗಳಿಂದ ತಮ್ಮ ಅರಣ್ಯ ಭೂಮಿ ಸಕ್ರಮಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ನ್ಯಾಯ ಸಿಕ್ಕಿಲ್ಲ. ಇದೀಗ ಮಾಡು ಇಲ್ಲವೆ ಮಡಿ ಎಂಬಂತೆ ಅರಣ್ಯ ವಾಸಿಗಳು ಶನಿವಾರ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಶಿರಸಿಯಲ್ಲಿ ಸಂಗ್ರಾಮವನ್ನ ನಡೆಸಿದರು.
ಸರಕಾರ ಅರಣ್ಯ ವಾಸಿಗಳ ಅರ್ಜಿಯನ್ನ ಪುನರಪರಿಶೀಲನೆ ನಡೆಸದೆ ತಿರಸ್ಕರಿಸಿದ ಹಿನ್ನಲೆಯಲ್ಲಿ ಮೇಲ್ಮನವಿ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ರಾಜ್ಯ ಸರಕಾರ ನ್ಯಾಯಾಲಯದ ಆದೇಶದಂತೆ ತಿರಸ್ಕರಿಸಿದ ಅರಣ್ಯವಾಸಿಗಳ ಅರ್ಜಿಯನ್ನ ಪುನರಪರಿಶೀಲಿಸದೇ ಅನ್ಯಾಯ ಮಾಡಿದೆ. ಹೀಗಾಗಿ ಅರಣ್ಯವಾಸಿಗಳು ಮೇಲ್ಮನವಿ ಅಭಿಯಾನ ಮತ್ತು ಅರಣ್ಯವಾಸಿಗಳ ಮಹಾ ಸಂಗ್ರಾಮಕ್ಕೆ ಮುಂದಾಗಿದ್ದಾರೆ.
ಶಿರಸಿಯಲ್ಲಿ ಸೇರಿದ ಅರಣ್ಯವಾಸಿಗಳು ವಿವಿಧ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ನ್ಯಾಯಕ್ಕಾಗಿ ಒತ್ತಾಯಿಸಿ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಸೇರಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 73ಸಾವಿರ ಅರಣ್ಯವಾಸಿಗಳ ಅರ್ಜಿ ತಿರಸ್ಕೃತಗೊಂಡಿದ್ದು ಅತಂತ್ರರಾಗುವ ಭೀತಿಯಲ್ಲಿದ್ದಾರೆ. ಈಗಾಗಲೇ 13 ಬಾರೀ ತಮ್ಮ ಭೂಮಿ ಸಕ್ರಮಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.
ಹೀಗಾಗಿ ತಮ್ಮ ಮೇಲ್ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರನಾಥ ನಾಯ್ಕ ಅವರ ನೇತೃತ್ವದಲ್ಲಿ ಕಳೆದ 34 ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ನಿರಾಶ್ರಿತರ ಜಿಲ್ಲೆಯೆಂಬ ಹಣೆಪಟ್ಟಿ ಹಾಕದ ಹಾಗೆ ಅರಣ್ಯವಾಸಿಗಳ ಆಸರೆ ನೀಡುವ ಕೆಲಸ ಮಾಡಬೇಕಾಗಿದೆ.
ಇದನ್ನು ಓದಿ : ಎಮ್ಮೆಗೆ ಡಿಕ್ಕಿ ಹೊಡೆದ ಸ್ಕೂಟಿ ಸವಾರ ಸ್ಥಳದಲ್ಲೇ ಸಾವು.