ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ(Murdeshwar) : ವಿಶ್ವ ಪ್ರಸಿದ್ಧ ಶ್ರೀ ಮುರ್ಡೇಶ್ವರ ದೇವಸ್ಥಾನದ(Murdeshwar Temple) ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅದೃಷ್ಟ ಡ್ರಾ ನಡೆಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಮುರ್ಡೇಶ್ವರ ಪೊಲೀಸರು(Murdeshwar Police) ಬಂಧಿಸಿದ್ದಾರೆ.
ಬಂಧಿತನನ್ನು ಬೀದರ್ ಜಿಲ್ಲೆಯ(Bidar District) ಬಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂದು ಗುರುತಿಸಲಾಗಿದೆ. ಆರೋಪಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಶ್ರೀ ಮುರ್ಡೇಶ್ವರ ದೇವಸ್ಥಾನದ ಫೋಟೋ ಬಳಸಿಕೊಂಡು “ಶ್ರೀ ಮುರ್ಡೇಶ್ವರ ಅದೃಷ್ಟ ಡ್ರಾ” ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಸೃಷ್ಟಿಸಿ, ಫೇಸ್ಬುಕ್(Facebook) ಹಾಗೂ ಇನ್ಸ್ಟಾಗ್ರಾಂನಲ್ಲಿ(Instagram) ನಕಲಿ ಖಾತೆಗಳನ್ನು ತೆರೆದು ಲಾಟರಿ ಟಿಕೆಟ್ಗಳ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಅವರು ಮುರ್ಡೇಶ್ವರ ಪೊಲೀಸ್ ಠಾಣೆಗೆ(Murdeshwar Police Station) ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳೆದ ಒಂದು ವರ್ಷದಿಂದ ರಾಜಸ್ಥಾನ(Rajasthan), ಮಹಾರಾಷ್ಟ್ರ(Maharashtra) ಹಾಗೂ ಬೀದರ್(Bidar) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ್ದರು.
ಸತತ ತನಿಖೆಯ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
