ಕಾರವಾರ: ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಮೂರು ಪ್ರಶಸ್ತಿಗಳು ಲಭಿಸಿವೆ.

 ಕಳೆದ 2023-24 ರ ಆರ್ಥಿಕ ವರ್ಷದಲ್ಲಿ ಅಂಚೆ ಸಾಮಾನ್ಯ ಸೇವೆಗಳ ಕೇಂದ್ರಗಳ ವ್ಯವಹಾರಗಳಲ್ಲಿ ಸುಮಾರು 1.36 ಕೋಟಿ ರೂಪಾಯಿಗಳ ಗುರುತರವಾದ ವ್ಯವಹಾರಗಳನ್ನು ಮಾಡಿ ಕಾರವಾರ ಅಂಚೆ ವಿಭಾಗವು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದರ ಜೊತೆಗೆ  ನಿವ್ವಳ ಖಾತೆಗಳ ಸಂಖ್ಯೆಯ ವಿಭಾಗದಲ್ಲಿ ಹೊನ್ನಾವರ ಅಂಚೆ  ನಿರೀಕ್ಷಕ ಕೆಎಚ್ ಸಂಕರಟ್ಟಿ ಇವರು ದ್ವಿತೀಯ ಪ್ರಶಸ್ತಿಯನ್ನು ಹಾಗೂ  ಅಂಚೆ ಕಚೇರಿಯ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಗಳನ್ನು ತೆರೆಯುವ  ವಿಭಾಗದಲ್ಲಿ ಹೊನ್ನಾವರ ಅಂಚೆ ಕಚೇರಿಯ ಅಂದಿನ ಅಂಚೆ ಪಾಲಕಿಯಾದ ಶ್ರೀಮತಿ ಅಂಕಿತ ಗೋವೆಕರ್ ಇವರು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಕರ್ನಾಟಕ ವೃತ್ತದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಆದ ಎಸ್ ರಾಜೇಂದ್ರ ಕುಮಾರವರು ವಿತರಿಸಿದರು. ಈ ಸಮಾರಂಭದಲ್ಲಿ ಕರ್ನಲ್ ಸುಶೀಲ್ ಕುಮಾರ್ ಉತ್ತರ ಕರ್ನಾಟಕ ಪಿ ಎಂ ಜಿ ,  ಎಲ್ ಕೆ  ದಾಸ್ ಬೆಂಗಳೂರು ಪಿ ಎಂ ಜಿ, ಡಾl ಚಂದ್ರಶೇಖರ ಕಾಕುಮಾನ್  ದಕ್ಷಿಣ ಕರ್ನಾಟಕ ಪಿ ಎಂ ಜಿ, ಶ್ರೀಮತಿ ಕೈಯಾ  ಆರೋರ ಅಂಚೆ ನಿರ್ದೇಶಕರು ಬೆಂಗಳೂರು,  ಸಂದೇಶ ಮಹಾದೇವಪ್ಪ ದಕ್ಷಿಣ ಕರ್ನಾಟಕ ಅಂಚೆ ನಿರ್ದೇಶಕರು ಹಾಗೂ ಶ್ರೀಮತಿ ವಿ.ತಾರ ಉತ್ತರ ಕರ್ನಾಟಕ ಅಂಚೆ ನಿರ್ದೇಶಕರು ಈ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಂಚೆ ಇಲಾಖೆಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಪಾನ್ ಕಾರ್ಡ್, ಪಾಸ್ಪೋರ್ಟ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರಿಚಾರ್ಜ್, ಹೆಸ್ಕಾಂ ಬಿಲ್ಲುಗಳು, ಎಲ್ಐಸಿ ಪ್ರೀಮಿಯಂಗಳು ಮತ್ತು ಮುಖ್ಯವಾಗಿ ರಾಷ್ಟ್ರೀಯ ಪೆನ್ಷನ್ ಯೋಜನೆ ಎನ್‌ಪಿಎಸ್ ಮಾಡಿಕೊಡಲಾಗುವುದು.

ಇಷ್ಟೇ ಅಲ್ಲದೆ ಅತ್ಯಂತ ಲಾಭಕರವಾಗಿರುವ ಅಂಚೆ ಕಚೇರಿ ಉಳಿತಾಯ ಯೋಜನೆಗಳು, ಗ್ರಾಮೀಣ ಅಂಚೆ ಜೀವ ವಿಮಾ, ಅಂಚೆ ಜೀವ ವಿಮೆ, ಅಪಘಾತ ವಿಮೆ, ವಾಹನ ವಿಮೆ, ಆರೋಗ್ಯವಿಮೆ ಇತ್ಯಾದಿ ಜನೋಪಯೋಗಿ ಯೋಜನೆ ಗಳಿಗೆ ಎಲ್ಲಾ ವಯೋಮಾನದವರು ಸಮೀಪದ ಅಂಚೆ ಕಚೇರಿಗೆ ಸಂಪರ್ಕಿಸಬೇಕಾಗಿ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.