ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು(Bangalore) : ಮನೆ ಕೆಲಸದಾಕೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ (Life Imprisonment) ಕಾರಾಗೃಹ ಶಿಕ್ಷೆ ವಿಧಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಅಡಿಯಲ್ಲಿ (ಅತ್ಯಾಚಾರ) ಅಪರಾಧಕ್ಕಾಗಿ ರೇವಣ್ಣ ಅವರಿಗೆ ನ್ಯಾಯಾಲಯವು 10 ಲಕ್ಷ ರೂ. ದಂಡ ವಿಧಿಸಿದೆ. ಒಟ್ಟು 10 ಲಕ್ಷ ರೂ. ದಂಡದಲ್ಲಿ 7 ಲಕ್ಷ ರೂಪಾಯಿಗಳನ್ನ ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಮಹತ್ವದ ಆದೇಶ ಪ್ರಕಟಿಸಿದೆ.
ಹಾಸನ(Hasan) ಜಿಲ್ಲೆಯ ಹೊಳೆನರಸೀಪುರದಲ್ಲಿರುವ (Holenarasipura) ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ತೋಟದ ಮನೆಯಲ್ಲಿ ಮತ್ತು ಬೆಂಗಳೂರಿನ ಬನಶಂಕರಿಯಲ್ಲಿನ ರೇವಣ್ಣ ನಿವಾಸದಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಿನ್ನೆ ಅಪರಾಧಿ ಎಂದು ತೀರ್ಮಾನಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಮತ್ತು ಬಿ ಎನ್ ಜಗದೀಶ್ ಹಾಗೂ ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರ ವಾದವನ್ನು ನ್ಯಾಯಾಲಯ ಆಲಿಸಿತು. ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್ ಪರ ಬಿ ಎನ್ ಜಗದೀಶ ಅವರು “ಜೀವನೋಪಾಯಕ್ಕಾಗಿ ಮನೆಕೆಲಸಕ್ಕೆ ಸೇರಿದ ಅನಕ್ಷರಸ್ಥೆಯ ಮೇಲೆ ಪ್ರಜ್ವಲ್ ಪದೇಪದೇ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೇಳೆ ಸೆರೆ ಹಿಡಿದಿರುವ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಮಾನಸಿಕವಾಗಿ ಹಿಂಸೆ ಅನುಭವಿಸಿ, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಸಾಕಷ್ಟು ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪ್ರಜ್ವಲ್ ವಿಡಿಯೋ ಮಾಡಿದ್ದಾನೆ. ಆತನ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರಜ್ವಲ್ಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಕೋರಿದ್ದರು
ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ನಾಯ್ಕ್ ಅವರು “ಅತ್ಯಂತ ಎಳೆಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ಎಸಗಿರುವ ಕೃತ್ಯ ಹೀನವಾದುದು. ಹೀಗಾಗಿ, ಪ್ರಜ್ವಲ್ಗೆ ದುಬಾರಿ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು. ದಂಡದ ಪೈಕಿ ಹೆಚ್ಚಿನ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವೀಡಿಯೊ ವೈರಲ್ ಆದುದರಿಂದ ಸಂತ್ರಸ್ತೆಯು ಸಾಮಾಜಿಕವಾಗಿ ಮುಜುಗರ, ಅವಮಾನ ಅನುಭವಿಸಿದ್ದಾರೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದ್ದರು. ಪ್ರಜ್ವಲ್ ಪರ ಹಿರಿಯ ವಕೀಲರಾದ ನಳಿನಾ ಮಾಯೇಗೌಡ ಅವರು “ಪ್ರಜ್ವಲ್ ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ. ಜನಸೇವೆಗೆ ಅವರು ರಾಜಕಾರಣಕ್ಕೆ ಬಂದಿದ್ದರು. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಶ್ಲೀಲ ವಿಡಿಯೊಗಳನ್ನು ಬಹಿರಂಗಗೊಳಿಸಲಾಗಿದೆ. ಪ್ರಜ್ವಲ್ ರಾಜಕೀಯ ಹಿನ್ನೆಲೆಯನ್ನು ಶಿಕ್ಷೆ ವಿಧಿಸಲು ಪರಿಗಣಿಸಬಾರದು ಎಂದು ತಮ್ಮ ವಾದ ಮಂಡಿಸಿದ್ದರು.
ಇಂದು ನ್ಯಾಯಾಲಯವೂ ಕಡಿಮೆ ಶಿಕ್ಷೆ ಪ್ರಮಾಣ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಆಗಸ್ಟ್ 5ರಂದು ಪ್ರಜ್ವಲ್ ಬರ್ತ್ ಡೇ ಆಚರಿಸಿಕೊಳ್ಳಲು ಇಡೀ ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಶಿಕ್ಷೆ ಪ್ರಮಾಣದ ಹಿನ್ನಲೆ ಹೆಚ್.ಡಿ ರೇವಣ್ಣ ನಿವಾಸದಲ್ಲಿ ಮೌನ ಆವರಿಸಿದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ವಕೀಲರ ಜೊತೆಗೆ ಚರ್ಚೆ ನಡೆಸಲು ಭವಾನಿ ರೇವಣ್ಣ(Bhavani Revanna) ತೀರ್ಮಾನ ಮಾಡಿದ್ದಾರೆ.
ಇದನ್ನು ಓದಿ : ಅರಬ್ಬಿ ಸಮುದ್ರದಲ್ಲಿ ಮೀನುಗಾರರಿಗೆ ಮುಂದುವರಿದ ಶೋಧ. ಈಶ್ವರ ಮಲ್ಪೆ ತಂಡದಿಂದ ಹುಡುಕಾಟ.
ಆಟೋ, ಬೈಕ್, ಸೈಕಲ್ ಮೇಲೆ ಬಂದು ಜೂಗಾರಾಟ. 11ಜನರ ಮೇಲೆ ಪ್ರಕರಣ.
ಯಾಂತ್ರಿಕ ದೋಣಿಯಲ್ಲಿ ಸಿಲಿಂಡರ್ ಸೋರಿಕೆ. ಬೆಂಕಿಯಾಗಿ ಆತಂಕ. ತಪ್ಪಿದ ಅನಾಹುತ.
ಪ್ರಜ್ವಲ್ ರೇವಣ್ಣ ಪ್ರಕರಣ. ಸರ್ಕಾರದ ಪರ ವಾದಿಸಿದ ಅಂಕೋಲೆಯ ಅಶೋಕ ನಾಯ್ಕ.