ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur): ದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೆಗಾ ಕಾಮಗಾರಿಯಲ್ಲಿ  ಭ್ರಷ್ಟಾಚಾರ ನಡೆದ ಬಗ್ಗೆ  ಲೋಕಾಯುಕ್ತರಿಗೆ ದೂರು ನೀಡುವ ತಯಾರಿ ನಡೆದಿದೆ.

ಈಗಾಗಲೇ ಒಂಬುಡ್ಸಮೆನ್’ಗೆ ದೂರು ಸಲ್ಲಿಸಲಾಗಿದ್ದು, . ಅಲ್ಲಿಯೂ ಸಹ ಭ್ರಷ್ಟಾಚಾರ  ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ದೆಹಳ್ಳಿ ಗ್ರಾ ಪಂ ಸದಸ್ಯ ವಿಶ್ವನಾಥ ಹಳೆಮನೆ,  ಸಾಮಾಜಿಕ ಕಾರ್ಯಕರ್ತ ನಾಗರಾಜ ಚಾಪೆತೋಡ ಹಾಗೂ ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ  ಧೀರಜ್ ತಿನೆಕರ್ ಜಂಟಿ ಸುದ್ದಿಗೋಷ್ಟಿ ನಡೆಸಿ ತನಿಖಾಧಿಕಾರಿ ವಿರುದ್ಧ ಲೋಕಾಯುಕ್ತ ದೂರು ನೀಡುವುದಾಗಿ ಹೇಳಿದ್ದಾರೆ.

ದೇಹಳ್ಳಿಯ ಶಾಲಾ ಮೈದಾನ ಸಮತಟ್ಟು ಕಾಮಗಾರಿಗೆ 2021-22 ರಲ್ಲಿ ಸುಮಾರು 4 ಲಕ್ಷ ರೂ ಕ್ರಿಯಾಯೋಜನೆ ಮಾಡಲಾಗಿತ್ತು. ಆದರೆ ಸುಮಾರು 70 ಸಾವಿರ ರೂ ಖರ್ಚಾಗಿದೆ. ಕಾಮಗಾರಿ ನಡೆದು ಪೂರ್ಣ ಬಿಲ್ ಆಗಿದ್ದರೂ, ಕಾಮಗಾರಿ ನಡೆದೇ ಇಲ್ಲ ಎಂದು ಪಿಡಿಒ ಮಾಹಿತಿ ನೀಡಿದ್ದಾರೆ. ಸರಿಯಾದ ಮಾಹಿತಿ ಕೊಡದೇ ಇದ್ದಾಗ ಈ ಬಗ್ಗೆ ಜಿಲ್ಲಾ ಒಂಬುಡ್ಸಮನ್ ಅವರಿಗೆ ದೂರಿದರೂ ಸರಿಯಾಗಿ ತನಿಖೆಯಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಒಂಬುಡ್ಸಮನ್ ಸಿ ಟಿ ನಾಯ್ಕ  ಅವರು ತನಿಖೆಗೆ ಬಂದು ತಾ.ಪಂ   ಕಚೇರಿಯಲ್ಲಿ ಸಭೆ ಕರೆದಾಗ ಪಿಡಿಒ ನಸ್ರೀನ ಭಾನು ಗೈರಾಗಿದ್ದರು. ಕಾಮಗಾರಿ ವಿಚಾರವಾಗಿ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ ತಾ.ಪಂಗೆ ವರದಿ ನೀಡುವಂತೆ ನೋಟೀಸ್ ನೀಡಿದ್ದಾಗಿ ಹೇಳಿ ಜಾರಿಕೊಂಡರು. ಕಳೆದ ಜುಲೈ 5 ರಂದು ಮತ್ತೊಮ್ಮೆ ವಿಚಾರಣೆಗಾಗಿ ಕರೆದಾಗಲೂ ಪಿಡಿಒ ಹಾಜರಾಗಿಲ್ಲ’ ಎಂದು ದೂರಿದರು. `ಜುಲೈ 31ರಂದು ಸ್ಥಳ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ನಮ್ಮೊಂದಿಗೆ ಸಾಮಾಜಿಕ ಕಾರ್ಯಕರ್ತರ ಉಪಸ್ಥಿತಿಗೆ, ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ನಿರಾಕರಿಸಿದ್ದರು. ಆದರೆ ಗ್ರಾ.ಪಂ.  ಅಧ್ಯಕ್ಷರೊಂದಿಗೆ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ಅನೇಕರು ಬಂದರೂ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ನಮ್ಮ ವಿರುದ್ಧ ಸಿಡಿಮಿಡಿಗೊಂಡರು’ ಎಂದು ನರಸಿಂಹ ಚಾಪೆತೋಟ ವಿವರಿಸಿದರು.

ಗ್ರಾ.ಪಂ ಸದಸ್ಯ ವಿಶ್ವನಾಥ ಹಳೆಮನೆ ಮಾತನಾಡಿ, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ. 25 ಕೂಲಿಗಳ ಹೆಸರು ಹಾಕಿ, ಬೇರೆ 12-13 ಜನರ ಖಾತೆಗಳಿಗೆ ಹಣ ಬಟವಡೆ ಮಾಡಲಾಗಿದೆ. ನಕಲಿ ಸಹಿ ಹಾಕಿರುವ ಅನುಮಾನವಿದೆ. ಕೆಲಸ ಮಾಡಿದ ಕೂಲಿಗಳೇ ಬೇರೆ, ಹಣ ಜಮಾ ಆಗಿರುವುದೇ ಬೇರೆಯವರ ಖಾತೆಗೆ. ಕಾಮಗಾರಿಯ ಮುಗಿದ ನಂತರ ಜಿಪಿಎಸ್ ಇಲ್ಲದ ಚಿತ್ರವನ್ನು ಅಂಟಿಸಿ ಬಿಲ್ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನೆಕರ್ ಮಾತನಾಡಿ, ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಜಿಲ್ಲಾ ಒಂಬುಡ್ಸಮನ್ ಸರಿಯಾದ ತನಿಖೆ ನಡೆಸಿಲ್ಲ. ಪಿಡಿಒ ಸರಿಯಾದ ಮಾಹಿತಿ ನೀಡಿಲ್ಲ. ತನಿಖೆ ನಡೆಸಲು ಬಂದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವ ಶಂಕೆಯಿದೆ. ಇವರ ವಿರುದ್ಧ ತನಿಖೆಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದೆಂದರು.

ಇದನ್ನು ಓದಿ : ಇನ್ನೈದು ವರ್ಷದಲ್ಲಿ ಕೈಗಾದ 5 ಮತ್ತು 6ನೇ ಘಟಕ ಕಾರ್ಯಾರಂಭ:  ವಿನೋದ್ ಕುಮಾರ್