ಉಡುಪಿ(UDUPI) : ಕರಾವಳಿಯ ಮೀನುಗಾರರ (KARAVALI FISHERMEN) ಬದುಕಿಗೆ ಆಸರೆಯಾಗಿರುವ ಸಮುದ್ರರಾಜನಿಗೆ ನೂಲು ಹುಣ್ಣಿಮೆಯ ದಿನವಾದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಈಗಾಗಲೇ ಆಗಸ್ಟ್ ಒಂದರಿಂದ ಮೀನುಗಾರಿಕೆ(FISHING) ಆರಂಭವಾಗಿದ್ದರೂ ಆಳ ಸಮುದ್ರ ಮೀನುಗಾರಿಕೆ ಇದುವರೆಗೆ ಕೈ ಹಿಡಿದಿಲ್ಲ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧವಾಗಿ ಮೀನುಗಾರಿಕೆ ಆಗುವಂತೆ ಪ್ರಾರ್ಥನೆ ಮಾಡಿಕೊಂಡರು. ಸಮುದ್ರರಾಜನಿಗೆ ಸಿಯಾಳ ಅಭಿಷೇಕ, ಹಾಲಿನ ಅಭಿಷೇಕ ಮಾಡಿದರು.
ಕೈಪುಂಜಾಲು ಮೊಗವೀರ ಗ್ರಾಮಸಭೆಯ ಸದಸ್ಯರು ಹಾಲು ಹಾಗೂ ಸಿಯಾಳವನ್ನ ಪಾಂಡುರಂಗ ಭಜನಾ ಮಂದಿರದಲ್ಲಿ ಸಂಗ್ರಹಿಸಿ ಪಾಂಡುರಂಗ ರುಕ್ಮಿಣಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಭಜನಾ ಸಂಕೀರ್ತನೆಯೊಂದಿಗೆ ಸಮುದ್ರಕ್ಕೆ ಆಗಮಿಸಿದರು.
ಅದರಂತೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಶೇಯೋಭಿವೃದ್ಧಿಗಾಗಿ ಮಲ್ಪೆಯ ವಡಬಾಂಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.
ಮಳೆಗಾಲದಲ್ಲಿ ಪ್ರಕ್ಷುಬ್ದಗೊಂಡಿರುವ ಕಡಲು ಶಾಂತಗೊಳಿಸುವ ಸಂಪ್ರದಾಯದಂತೆ ಸಮುದ್ರ ಪೂಜೆ ಮಾಡಿದರು. ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಸಮುದ್ರ ಪೂಜೆ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಹೇರಳ ಮತ್ಸ್ಯ ಸಂಪತ್ತಿನ ಮೂಲಕ ಮೀನುಗಾರರ ಬದುಕು ಸಮೃದ್ಧವಾಗಲಿ ಎಂದು ಹಾರೈಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿವಿಧ ಮೀನುಗಾರ ಸಂಘಟನೆಗಳ ಪ್ರಮುಖರು, ಮೀನುಗಾರ ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.