ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಳೆದ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜನಮನದ ಬಹುಮುಖ ಪ್ರತಿಭಾವಂತ   ಶಿಕ್ಷಕ ಪಿ ಆರ್ ನಾಯ್ಕ ಅವರನ್ನು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ.  ಸದಾ ಒಂದಿಲ್ಲೊಂದು ಪ್ರಯೋಗಾತ್ಮಕ ಕ್ರಿಯಾಶೀಲ ಕಾರ್ಯಚಟುವಟಿಕೆಯ ಮೂಲಕ ಮಕ್ಕಳ ಸ್ನೇಹಿ ಶಿಕ್ಷಕರಾಗಿ ಜಿಲ್ಲೆಗೆ ಮಾದರಿಯಾದ ಅನೇಕ ವೈವಿಧ್ಯಮಯ ಕಾರ್ಯ ಯೋಜನೆ ರೂಪಿಸಿ ಮಕ್ಕಳ ಗುಣಾತ್ಮಕ ಕಲಿಕೆಗೆ ಹಲವು ನಾವಿನ್ಯಯುತ ಚಟುವಟಿಕೆ ರೂಪಿಸಿದ ಹೆಗ್ಗಳಿಕೆ ಪಿ ಆರ್ ನಾಯ್ಕ ಅವರದ್ದಾಗಿದೆ. ಸುಮಾರು ನಾಲ್ಕುವರೆ ವರ್ಷಗಳ ಕಾಲ ಆಡಳಿತಾತ್ಮಕ ಕಾರ್ಯದ ಸೇವಾ ಅವಧಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ, ಸಾಕ್ಷರತಾ ಸಮನ್ವಯಾಧಿಕಾರಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಇಲಾಖೆಯ ಘನತೆ ಗೌರವ ಹೆಚ್ಚಿಸಿರುತ್ತಾರೆ.

ಇಪ್ಪತ್ತೇಳುವರೆ ವರ್ಷಗಳ ಕಾಲ ಬೋಧನಾ ಕಾರ್ಯದ ಸೇವಾ ಅವಧಿಯಲ್ಲಿ 30ಕ್ಕೂ ಹೆಚ್ಚು ವಿವಿಧ ತರಬೇತಿಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ಸಾವಿರಾರು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದವರು. ತರಬೇತಿಯಲ್ಲಿ ಪಡೆದ ಅನುಭವವನ್ನು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡುವುದರ ಮೂಲಕ ಗುಣಾತ್ಮಕ ಕಲಿಕೆಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಕ್ಯೂ ಎಂಟಿ, ಸಮಾಗಮ, ನೈರ್ಮಲ್ಯ, ಕ್ಲಿಸ್ಟಾಂಶಗಳು, ವಿಷಯಧಾರಿತ, ಶೈಕ್ಷಣಿಕ ದೃಷ್ಟಿಕೋನ, ನಲಿಕಲಿ ಇಂಗ್ಲಿಷ್, ಎನ್.ಎ. ಎಸ್., ಚೈತನ್ಯ, ಸಿ.ಎಸ್ಎ.ಎಸ್., ಕೆ. ಎಸ್. ಕ್ಯೂ .ಎ.ಎ. ಸಿ., ಕಲಿಕಾ ಅಂತರ್ಗತ ಕಲಿಕೆ, ಆಡಳಿತದಲ್ಲಿ ಕನ್ನಡ, ಶಿಕ್ಷಣದಲ್ಲಿ ರಂಗಕಲೆ, ಬುನಾದಿ, ಮುಂದುವರಿದ ಶಿಕ್ಷಣ ಯೋಜನೆ, ಸೌರಭ, ನಲಿಕಲಿ, ಎಸ್.ಡಿ.ಎಂ.ಸಿ, ಬೆಳ್ಳಿಮೋಡ, ಹಸಿರು ಪಠ್ಯಕ್ರಮ, ನಲಿಕಲಿ ಸಂಭ್ರಮ, ನಲಿಕಲಿ ಮೈಕ್ರೋ ಅಧ್ಯಯನ, ಸಾಧನ, ಬಿ. ಆರ್.ಪಿ.ಸಿ. ಆರ್. ಪಿ. ಗಳ ಕಾರ್ಯ ಕ್ಷಮತೆ ಹೆಚ್ಚಿಸುವ ಬುನಾದಿ, ರಚನಾ, ಶಾಲಾ ನಾಯಕತ್ವ, ಕಲಿಕಾ ಸಾಮಗ್ರಿ ತಯಾರಿಕಾ ಕಾರ್ಯಗಾರ ಮುಂತಾದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸಿ ತರಗತಿ ಕೋಣೆಯಲ್ಲಿ ಪರಿಮಾಣಾತ್ಮಕವಾಗಿ ಅನುಷ್ಠಾನ ಮಾಡಿರುವ ಬಹುಮುಖ ಪ್ರತಿಭಾವಂತ ಶಿಕ್ಷಕರಿವರು.

ನಲಿ- ಕಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆಯೋಜಿಸಿದ ವಿದ್ಯಾ ಪ್ರವೇಶ ಕಲಿಕೆಗೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಕಲಿಕೆಯಲ್ಲಿ ಪಾಠ ನಾಟಕ ಅಳವಡಿಸಿದ ಜಿಲ್ಲೆಯ ಏಕಮೇವ ಶಿಕ್ಷಕ ಎನ್ನುವ ಹೆಗ್ಗಳಿಕೆ ಪಿ ಆರ್ ನಾಯ್ಕ ಅವರದ್ದಾಗಿದೆ. “ನಮ್ಮಕ್ಳು” ಯೂಟ್ಯೂಬ್ ಚಾನೆಲ್ ಮೂಲಕ ಮಕ್ಕಳ ಕಲಿಕೆಗೆ ವಿಶೇಷ ಒತ್ತು ನೀಡಲಾಗಿದೆ. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಇ ಸಂಪನ್ಮೂಲಗಳನ್ನು ಸೃಜಿಸಿ ೩,೪,೫,೬,೭ ನೇ ತರಗತಿಯ ಗದ್ಯ ಪಾಠವನ್ನು ನಾಟಕಕ್ಕೆ ಪರಿವರ್ತಿಸಿ ಕೆಲವು ಪಾತ್ರಗಳನ್ನು ಸೃಷ್ಟಿಸಿ ಮಕ್ಕಳಿಂದಲೇ ಅಭಿನಯಿಸಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿರುವ ಇವರು ಎರಡು ನೂರಕ್ಕೂ ಹೆಚ್ಚು ಸಾಮಾಜಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಅನೇಕ ಯುವಕ ಸಂಘಗಳು ಸಂಘಟಿಸುವ ನಾಟಕಕ್ಕೆ ನಿರ್ದೇಶಕರಾಗಿಯೂ ದುಡಿದಿರುತ್ತಾರೆ. ನ್ಯಾಯ ನಿರ್ಣಯ, ವೀರ ಮಾತೆ ಜೀಜಾಬಾಯಿ, ನದಿಯ ಅಳಲು, ನಮ್ಮ ಮಾತು ಕೇಳಿ, ಚಿನ್ನದ ಗೊಂಬೆಗಳು, ಬುದ್ಧಿವಂತ ರಾಮಕೃಷ್ಣ, ಗಂಧರ್ವ ಸೇನ, ಧನ್ಯವಾದ ಹೇಳಿದ ಕೊಕ್ಕರೆ, ಒಟ್ಟಿಗೆ ಬಾಳುವ ಆನಂದ ಮುಂತಾದ 40ಕ್ಕೂ ಹೆಚ್ಚು ಪಾಠಗಳನ್ನು ಸೃಜಿಸಿರುತ್ತಾರೆ.

ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಸುತ್ತಲಿನ ಪರಿಸರದಲ್ಲಿರುವ ಮೂಲ ಕಸಬುದಾರರನ್ನು, ಕೃಷಿಕರನ್ನು, ವಿಶೇಷ ಸಾಧಕರನ್ನು, ಕಮ್ಮಾರ, ಬಡಿಗ, ಕುಂಬಾರ, ವೃತ್ತಿ ಬದುಕಿನ ಸಾಧಕರ ಮನೆಗೆ ಭೇಟಿ ನೀಡಿ ಅವರ ಕಸುಬಿನ ಬಗ್ಗೆ ಮಕ್ಕಳಿಗೆ ಪರಿಚಯಿಸುವ ಅಪರೂಪದ ಕಾರ್ಯ ಸಾಧನೆ ಇವರಿಂದಾಗಿದೆ. ಪರಿಸರದಲ್ಲಿರುವ ಬಿದಿರು, ಹಲಸು, ಮಾವು, ತೇಗ, ಬೀಟೆ, ಹೊನ್ನೆ, ಸಾಗುವಾನಿ ಮುಂತಾದ ಬೆಲೆಬಾಳುವ ಮರಗಳನ್ನು ಪರಿಚಯಿಸಿ ಅದರಿಂದ ಆಗುವ ಪ್ರಯೋಜನದ ಜೊತೆಗೆ ಸಂರಕ್ಷಿಸುವ ವಿಧಾನ ಮಕ್ಕಳ ಬಾಲ್ಯದ ಶಿಕ್ಷಣದಲ್ಲಿ ಅಳವಡಿಸಿ ಬದುಕಿನ ಅನುಭವದ ಜೊತೆಗೆ ಕಟ್ಟಿಕೊಟ್ಟಿದ್ದಾರೆ.

ಕೋರೊನಾ ಕಾಲದಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಸಂದರ್ಭದಲ್ಲಿ ವಿಶೇಷ ಕಲಿಕಾ ಸಾಮಗ್ರಿ ತಯಾರಿಸಿ ಕಲಿಕಾ ಕಿಟ್ಟನ್ನು ವಿದ್ಯಾರ್ಥಿಗಳಿಗೆ ನೀಡಿ ಕಲಿಕೆಯನ್ನು ಉತ್ತೇಜಿಸಿರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಆಯೋಗದಿಂದ ಪ್ರಶಂಸನಾ ಪತ್ರ ಪಡೆದಿರುತ್ತಾರೆ. ಹದ್ಲೂರು, ಬೆಳ್ಕೆ, ಶಿರಾಲಿ, ಬಂಗಾರಮಕ್ಕಿ, ಕಲ್ಕಟ್ಟು, ಅಂಸಳ್ಳಿ ಮತ್ತು ಹೊನ್ನಾವರ ಪಟ್ಟಣದ ಶಾಲೆಯಲ್ಲಿ ಸೇವೆ ಸಲ್ಲಿಸುವಾಗಲೆಲ್ಲ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ ನಿರ್ಮಿಸಿ ನಲಿ-ಕಲಿ ತರಗತಿಯನ್ನು ಶಿಶು ಸ್ನೇಹಿ ಕಲಿಕಾ ತರಗತಿಯನ್ನಾಗಿ ಪರಿವರ್ತಿಸಿದವರು.  ದಾನಿಗಳ ಸಹಕಾರದಿಂದ ಪ್ಲೆಕ್ಸ್ ತಯಾರಿಸಿ ಕನ್ನಡ, ಗಣಿತ, ಪರಿಸರ, ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳನ್ನು, ಅಂಕೆ- ಸಂಖ್ಯೆಗಳನ್ನು ಅಳವಡಿಸಿ ಮಕ್ಕಳ ಗುಣಮಟ್ಟದ ಕಲಿಕೆಗೆ ಮೊದಲ ಆದ್ಯತೆ ನೀಡಿರುತ್ತಾರೆ.

ಟೆಂಟ್ ನಲ್ಲಿ ವಾಸ ಮಾಡುವ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಾಡು, ನೃತ್ಯ, ನಾಟಕದ ಮೂಲಕ “ಶಿಕ್ಷಣದಲ್ಲಿ ರಂಗಕಲೆ” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿರುತ್ತಾರೆ. ಮಕ್ಕಳಲ್ಲಿ ಸಾಹಿತ್ಯಾ ಶಕ್ತಿ ಮೂಡಿಸಲು “ಮಕ್ಕಳ ಸಾಹಿತ್ಯ ಕಮ್ಮಟ”ಏರ್ಪಡಿಸಿ ಕಥೆ- ಕಾವ್ಯ ಕಟ್ಟುವ ಕುರಿತು ಹಿರಿಯ ಸಾಹಿತಿಗಳಿಂದ ಮಾರ್ಗದರ್ಶನ ಮಾಡಿಸಿರುತ್ತಾರೆ.  ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ತಂಡ ರಚಿಸಿ ಪಾಲಕರ ಮನವೊಲಿಸಿ ಮಕ್ಕಳನ್ನು ಪುನಃ ಶಾಲೆಗೆ ತರಲು “ಚಿಣ್ಣರ ಚಿತ್ತಾರ” ಕಾರ್ಯಕ್ರಮ ಆಯೋಜಿಸಿರುತ್ತಾರೆ. “ಜಗುಲಿಯ ಮೇಲಿನ ಸಾಧಕರು” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸ್ಥಳೀಯ ಪ್ರತಿಭೆಗಳನ್ನು, ಸಾಧಕರನ್ನು, ಸಾಹಿತಿಗಳನ್ನು ಪರಿಚಯಿಸುವ ಕಾರ್ಯವನ್ನು ಸಂಘಟಿಸಿರುತ್ತಾರೆ. ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ “ತಣ್ಣೀರು” ನಾಟಕ ರಚಿಸಿ ಹೊನ್ನಾವರ, ಭಟ್ಕಳ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ, ಹೊನ್ನಾವರದ ಪೇದ್ರು ಪೋವೆಡಾ ವಿಶೇಷ ಶಾಲೆಯಲ್ಲಿ ಪಟ್ಟಣದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ “ತಣ್ಣೀರು” ನಾಟಕ ಪ್ರದರ್ಶಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಲು “ಶಾಲೆಗಳತ್ತ ಸಾಹಿತಿಗಳು” ಎಂಬ ಶಿರೋನಾಮದಡಿಯಲ್ಲಿ ಅನೇಕ ಸಾಹಿತಿಗಳನ್ನು ಶಾಲೆಗೆ ಕರೆಸಿ ಉಪನ್ಯಾಸ, ಕಾರ್ಯಾಗಾರ, ಕಥೆ- ಕಾವ್ಯ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಿ ಮಕ್ಕಳ ಸಾಹಿತ್ಯಾ ಶಕ್ತಿಗೆ ಪ್ರೇರೇಪಿಸಲಾಗಿದೆ.

ಭಟ್ಕಳದ ಬೆಳಕೆ ಶಾಲೆಯಲ್ಲಿ ಜಿಲ್ಲೆಗೆ ಮಾದರಿಯಾದ ಚೈತನ್ಯ ಮಾದರಿ ಕೋಣೆ, ಬಂಗಾರಮಕ್ಕಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಶು ಸ್ನೇಹಿ ನಲಿ- ಕಲಿ ಕೊಠಡಿ, ಪುಟಾಣಿ ವಿಜ್ಞಾನ ಕಾರ್ಯಕ್ರಮ ಅನುಷ್ಠಾನ ಮಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಿರುತ್ತಾರೆ. “ಚಿಣ್ಣರ ರಂಗ” ಮಕ್ಕಳ ನಾಟಕ ತಂಡ ರಚಿಸಿ ಪಾಠಕ್ಕೆ ಪೂರಕವಾದ ನಾಟಕವನ್ನು ರಚಿಸಿ ನಿರ್ದೇಶಿಸಿ ಮಕ್ಕಳಿಂದಲೇ ಅಭಿನಯಿಸಿರುತ್ತಾರೆ.”ಬೆಳಕು ಹಂಚಿದ ಬಾಲಕ”,”ನಾನು ಗಾಂಧಿ ಆಗ್ತೇನೆ” ನಾಟಕವು ಹಲವು ಪುರಸ್ಕಾರಕ್ಕೆ ಭಾಜನವಾಗಿದೆ.

ಸಾಹಿತಿಯಾಗಿರುವ ಶಿಕ್ಷಕ ಪಿ. ಆರ್  ನಾಯ್ಕರು ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮಾ,‌ ನಮ್ಮವರು ನಮ್ಮ ಜನಾಂಗ, ಭಾವಾಭಿನಂದನೆ, ಪ್ರತಿಭಾ ಸಂಪನ್ನ,  ದೇವಗಿರಿ, ಪಾಟಿಚೀಲ, ಅಕ್ಷರ ಸಂಗಾತಿ, ಜಿಲ್ಲೆಯ ಜನಪದ ಕಲೆ, ನಮ್ ಕಥೆ, ನಮ್ಮ ವ್ಯಥೆ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುತ್ತಾರೆ. “ಪಾಟಿಚೀಲ’ ಮಕ್ಕಳ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಶಿಶು ಸಂಗಮೇಶ ದತ್ತಿ ಪುರಸ್ಕಾರ ಲಭಿಸಿದೆ. ಭಟ್ಕಳ ತಾಲೂಕಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ರಾಜ್ಯಮಟ್ಟದ ಗುರು ಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಇವರ ಮುಡಿಗೇರಿದೆ. ಶಿಕ್ಷಕರಿಗಾಗಿ ಸಂಘಟಿಸಿದ ಜಿಲ್ಲಾಮಟ್ಟದ ಛದ್ಮವೇಶ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಉತ್ತಮ ಅಂಕಣಕಾರ ಪ್ರಶಸ್ತಿ, ಜಿಲ್ಲಾ ಕಥಾ ಸ್ಪರ್ಧೆಯಲ್ಲಿ ಬಹುಮಾನ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕೃತರಾಗಿರುತ್ತಾರೆ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ, ಕದಂಬೋತ್ಸವ, ಗಡಿನಾಡು ಉತ್ಸವ ಮುಂತಾದ ಪ್ರದೇಶಗಳಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ನೇಮಕರಾಗಿರುತ್ತಾರೆ. ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ, ಕೆ. ಎಸ್. ಕ್ಯೂ. ಎ. ಎ. ಸಿ, ನ್ಯಾಸ್, ಸಿ.ಎಸ್. ಎ. ಎಸ್. ಕಾರ್ಯಕ್ರಮದ ನೋಡಲ ಅಧಿಕಾರಿಯಾಗಿ, ನಲಿ-ಕಲಿ ಉತ್ತಮ ಶಿಕ್ಷಕ ಆಯ್ಕೆ ಸಮಿತಿಯ ಸದಸ್ಯರಾಗಿ, ತಾಲೂಕಾ ಕಸಾಪ ಘಟಕದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ,ಡಾ. ಸೈಯ್ಯದ್ ಜಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿ, ಸಾಹಿತ್ಯ ಸಮ್ಮೇಳನದ ಕೃತಿ ಪ್ರಕಟನಾ ಸಮಿತಿಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಕಟಿಸುವ ಗ್ರಾಮ ಚರಿತ್ರಾ ಕೋಶದ ಕ್ಷೇತ್ರ ತಜ್ಞರಾಗಿ ಕಾರವಾರ, ಜೋಯಿಡಾ, ಸಿದ್ದಾಪುರ ತಾಲೂಕಿಗೆ ನೇಮಕರಾಗಿ ಕ್ಷೇತ್ರ ಅಧ್ಯಯನ ನಡೆಸಿ ಕೃತಿ ಪ್ರಕಟಿಸಿರುತ್ತಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾ ಅವಧಿಯಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ ಅವರಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶ ಕಲ್ಪಿಸುವ ಚಿಣ್ಣರ ಚಿತ್ತಾರ, ಶಿಕ್ಷಣದಲ್ಲಿ ರಂಗಕಲೆ, ಬೇಸಿಗೆ ಶಿಬಿರ, ಪರಿಸರದ ಸುತ್ತ ಒಂದು ಸುತ್ತು, ಶರಾವತಿಯಲ್ಲೊಂದು ಜೀವ ವೈವಿಧ್ಯ ಪರಿಚಯ ಪಯಣ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಸಾಹಿತಿಗಳ ಚಿತ್ತ ಶಾಲೆಯುತ್ತ, ಕಥಾ- ಕಾವ್ಯ ಕಮ್ಮಟ, ಜಗುಲಿಯ ಮೇಲಿನ ಸಾಧಕರು ಮುಂತಾದ ಕಾರ್ಯಕ್ರಮಗಳಿಗೆ ವೇದಿಕೆ ಸಂಘಟಿಸಿ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದ ಕ್ರಿಯಾಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಪಿ . ಆರ್. ನಾಯ್ಕರಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ.