ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಹೊನ್ನಾವರ(Honnavar) : ಕನ್ನಡ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ, ವಿಮರ್ಶಕ, ಕವಿ, ಸಂಘಟಕ ಡಾ ಎನ್ ಆರ್ ನಾಯಕ ನಿಧರಾಗಿದ್ದಾರೆ.
ಅವರಿಗೆ 90 ವರ್ಷ ವಯಸ್ಸಾಗಿತ್ತು. ಎನ್ ಆರ್ ನಾಯಕ ಅವರ ಅಗಲುವಿಕೆ ಜಾನಪದ ಕ್ಷೇತ್ರದ ಒಬ್ಬ ಹಿರಿಯ ಕೊಂಡಿ ಕಳಚಿದಂತಾಗಿದೆ. ಅಪ್ಪಟ ಗ್ರಾಮೀಣ ಜಾನಪದ ತಜ್ಞರಾಗಿ ನಾಡು ಕಂಡ ಒಬ್ಬ ಅಪರೂಪದ ಸಾಧಕರಾಗಿದ್ದರು. ಕಳೆದ ಶತಮಾನದ ಆರಂಭದ ಒಂದೆರಡು ದಶಕಗಳ ನಂತರ ನಡೆದ ಜನಪದ ಕ್ಷೇತ್ರ ಕಾರ್ಯಗಳು, ವಿಚಾರ- ವಿಮರ್ಶೆ ಅಪೂರ್ವವಾದದ್ದು. ಆ ದಾರಿಯಲ್ಲಿ ತೊಡಗಿಸಿಕೊಂಡ ಕನ್ನಡದ ವಿದ್ವಾಂಸರಲ್ಲಿ ಡಾ. ಎನ್. ಆರ್. ನಾಯಕರು ಒಬ್ಬರು.
ತಿತಿಂಗಳ ಹಿಂದಷ್ಟೇ ಅವರ ಧರ್ಮಪತ್ನಿ ಶಾಂತಿ ನಾಯಕ ಅಗಲಿದ್ದರು. ಪತ್ನಿ ಅಗಲುವಿಕೆಯಿಂದ ಅವರು ನೊಂದಿದ್ದರು.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಈ ಕ್ಷೇತ್ರವನ್ನು ತಮ್ಮ ಎದೆಗೆ ಹಚ್ಚಿಕೊಂಡು ಸಪತ್ನಿಕರಾಗಿ ನೂರು ಕಾಲ ನಿಲ್ಲುವಂತೆ ಕೆಲಸ ಮಾಡಿದ್ದಾರೆ. ಜೇಂಗೊಡ, ಪಡುಕೋಗಿಲೆ, ಕನ್ನಡ ಬಯಲಾಟ ಪರಂಪರೆ, ಕಾರವಾರ ಜಿಲ್ಲೆಯ ಜನಪದ ಗೀತೆಗಳು, ಹಾಲಕ್ಕಿ ಒಕ್ಕಲಿಗರ ಜನಪದ ಗೀತೆಗಳು, ಸುಗ್ಗಿಯ ಪದಗಳು, ತುಳಸಿ ತಿಮ್ಮಪ್ಪರಾಯ, ಗಾಮೊಕ್ಕಲ ಮಹಾಭಾರತ, ಮುಕ್ರಿಗಳ ಜನಪದ ಗೀತೆ ಮತ್ತು ಕಥೆಗಳು, ಉತ್ತರ ಕನ್ನಡ ಜಿಲ್ಲೆಯ ಗ್ರಾಮ ದೇವತೆಗಳ ಹಾಡುಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಕ್ಕೂ ಹೆಚ್ಚು ಕೃತಿಗಳು ಇವರಿಂದ ಪ್ರಕಟಗೊಂಡಿದೆ. ಅವರ ಕಥನ ಕವನಗಳಲ್ಲಿ ಅಚ್ಚ ದೇಶಿಯ ಎನ್ನಬಹುದಾದ ಪದಗಳಿಗೆ ಆಯಾ ಪುಟಗಳಲ್ಲಿ ಕೆಳಬದಿಗೆ ಅರ್ಥ ವಿವರಣೆ ನೀಡಿರುವುದು ಉತ್ತರ ಕನ್ನಡದವರಲ್ಲದವರಿಗೂ ಇಲ್ಲಿಯ ಹಾಡುಗಳ ಒಳ ಪ್ರವೇಶ ಮಾಡುವುದಕ್ಕೆ ಹೆಚ್ಚಿನ ಸಹಾಯ ನೀಡಬಹುದಾಗಿದೆ. ಅವರ ಜನಪದ ಕಥೆಗಳಲ್ಲಿ, ಕವನಗಳಲ್ಲಿ ಬರುವ ಪವಾಡ ಸದೃಶ ಘಟನೆಗಳು ಕವನ ಸಂಕಲನದ ಎಲ್ಲಾ ಕವನಗಳಲ್ಲೂ ಸಿಗುತ್ತವೆ. ತಮ್ಮ ಬದುಕಿನ ಬಹುಪಾಲು ದಿನಗಳನ್ನು ಜಾನಪದ ಕ್ಷೇತ್ರಕ್ಕೆ ಮೀಸಲಾಗಿಟ್ಟು ನಿರಂತರವಾಗಿ ಆ ಕ್ಷೇತ್ರದ ಮುನ್ನಡೆಗೆ ತೊಡಗಿಸಿಕೊಂಡವರು.
ಜಾನಪದ ದೀಪಾರಾಧನೆಯ ಜೊತೆಗೆ ಅವರ ಕಾವ್ಯರಾಧನೆಯು ಮುಂದುವರಿದಿರುವುದು ಅವರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಸಂಕೀರ್ಣತೆಗಿಂತ ಸರಳತೆ ಅವರಿಗೆ ಇಷ್ಟ. ಛಂದೋ ರೂಪಗಳಲ್ಲಿ ವೈವಿಧ್ಯ ಕಡಿಮೆಯಾಗಿದ್ದರು ಜಾನಪದ ಹಾಗೂ ಜಾನಪದ ಲಯವನ್ನು ತಮ್ಮದಾಗಿಸಿಕೊಂಡು ತನ್ನತನವನ್ನು ಬಿಟ್ಟುಕೊಡದೆ ಮಾನವೀಯತೆ, ನಿಸರ್ಗ ಪ್ರೀತಿ ಹಾಗೂ ಆಧ್ಯಾತ್ಮಿಕ ವಲಯವನ್ನು ಕಳಕಳಿಯಿಂದ ಪ್ರದರ್ಶಿಸಿದವರು. ದಲಿತರ ಬಗೆಗಿನ ಕಾಳಜಿಯೊಂದಿಗೆ ಸಾಮಾಜಿಕ ಬದ್ಧತೆಯುಳ್ಳವರು. ಮಕ್ಕಳ ಬಗ್ಗೆ ವಿಶೇಷ ಕಾಳಜಿಯುಳ್ಳ ಶ್ರೀಯುತರು ಮಕ್ಕಳ ಬೇಕು ಬೇಡಗಳನ್ನು, ಹಿರಿಯರು ನಿರ್ವಹಿಸಬೇಕಾದ ಕರ್ತವ್ಯಗಳನ್ನು, ಮಕ್ಕಳ ಸೃಜನಾತ್ಮಕ, ಬೌದ್ಧಿಕ, ಮಾನಸಿಕ, ನೈತಿಕ,ಆಧ್ಯಾತ್ಮಿಕ ವಿಕಸನಕ್ಕಾಗಿ ಶಿಕ್ಷಣ ತಜ್ಞರು ಪಾಲಿಸಬೇಕಾದ ಎಚ್ಚರಿಕೆಗಳನ್ನು ತಮ್ಮ “ಬದುಕು ಮಹಾಕಾವ್ಯ” ಗ್ರಂಥದಲ್ಲಿ ಕಟ್ಟಿಕೊಟ್ಟಿರುತ್ತಾರೆ.*
*ಮೂಲತಃ ಅಂಕೋಲಾ ತಾಲೂಕಿನ ಬಾವಿಕೇರಿಯಲ್ಲಿ ೧೯೩೫ರಂದು ಜನಿಸಿದ ಎನ್ ಆರ್ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಜಾನಪದ ವಿದ್ವಾಂಸರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.
*ಹೊನ್ನಾವರ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ ಎನ್. ಆರ್. ನಾಯಕರು ಕನ್ನಡದ ವಿದ್ವಾಂಸರು. ಕಾವ್ಯ,ನಾಟಕ, ಸಂಶೋಧನಾ ಪ್ರಬಂಧ, ಜಾನಪದ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿದು ಆ ಕ್ಷೇತ್ರಕ್ಕೆ ಬಲತಂದು ಕೊಟ್ಟ ಪುಣ್ಯಾತ್ಮರು ಎಂದು ಅತಿಶಯೋಕ್ತಿಯಿಲ್ಲ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿಯೂ, ಕನ್ನಡ ಪ್ರಾಧಿಕಾರದ ಸದಸ್ಯರಾಗಿಯೂ, ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಯ ಕೌನ್ಸಿಲರಾಗಿಯೂ, ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾಗಿಯೂ, ಕಾಲೇಜ್ ಡೆವೆಲಪ್ಮೆಂಟ್ ಕೌನ್ಸಿಲ್ ಸಮಿತಿಯ ಸದಸ್ಯರಾಗಿಯೂ, ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿಯೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸದಸ್ಯರಾಗಿಯೂ, ಶಿವರಾಂ ಕಾರಂತ್ ನಿಸರ್ಗಧಾಮದ ಸಮಿತಿಯ ಸದಸ್ಯರಾಗಿಯೂ, ಅಪಾರ ಅನುಭವ ಗಳಿಸಿ ೧೯೮೬ ರಲ್ಲಿ ಕುಮಟಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ೧೯೯೧ ರಲ್ಲಿ ಗೋಕರ್ಣದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲೆಯ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜನಾನುರಾಗಿಯಾಗಿದ್ದರು.
ಜಾನಪದ ಪ್ರಸಾರಕ್ಕಾಗಿ ೧೯೮೨ ರಲ್ಲಿ ಜಾನಪದ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಈವರೆಗೆ ಜಾನಪದಕ್ಕೆ ಸಂಬಂಧಿಸಿದ ೬೦ ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ೧೯೮೩ರಿಂದ ಜಾನಪದ ದೀಪಾರಾಧನೆಯ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿಯೂ, ೧೯೯೮ ರಲ್ಲಿ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿಯೂ ಅದನ್ನು ವಿಸ್ತರಿಸಿ ಹಲವು ಜಾನಪದ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಿ ಆ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದರು.
ಹೊನ್ನಾವರದಲ್ಲಿ ತಮ್ಮ ವೃತ್ತಿ ಬದುಕಿನ ಜೊತೆಗೆ ಇತರ ಸಂಘಟನೆಯಲ್ಲಿಯೂ ತೊಡಗಿಸಿಕೊಂಡು ಸ್ವತಃ ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಗೆ ಇವರದ್ದಾಗಿದೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಿಂದ ಮುಖ್ಯಮಂತ್ರಿ ಚಂದ್ರು ಅವರಿಂದ ನಾಟಕ ತರಬೇತಿ, ಕಮ್ಮಟ ರಾಜ್ಯಮಟ್ಟದ ನಾಟಕೋತ್ಸವ ಸಂಘಟಿಸಿರುತ್ತಾರೆ. ನಾಡಿನ ಖ್ಯಾತ ರಂಗ ನಿರ್ದೇಶಕರಿಂದ ನಾಟಕ ತರಬೇತಿ ಕಮ್ಮಟಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ನಾಟಕದ ಆಸಕ್ತಿ ಮೂಡಿಸಿರುತ್ತಾರೆ. ಮುಡೇ೯ಶ್ವರದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸಹಕಾರದಿಂದ ಕರ್ನಾಟಕ ಜಾನಪದ ಮತ್ತು ಕಲಾ ಮೇಳ ಸಂಘಟಿಸಿರುತ್ತಾರೆ.
ಜನಾಂಗಿಯ ಅಧ್ಯಯನಕಾರರಾದ ಇವರು ಉತ್ತರಕನ್ನಡ ಜಿಲ್ಲೆಯ ಸಿದ್ದಿ ಜನಾಂಗ, ಹಾಲಕ್ಕಿ,ಒಕ್ಕಲಿಗರ ಸಮೃದ್ಧಿ, ಜಿಲ್ಲೆಯ ನಾಡವರ ಸಂಸ್ಕೃತಿ, ಗಾಮೊಕ್ಕಲು ಒಂದು ಸಾಂಸ್ಕೃತಿಕ ಅಧ್ಯಯನ, ನಾಡವರ ಒಂದು ಸಾಂಸ್ಕೃತಿಕ ಅಧ್ಯಯನ, ಹಾಲಕ್ಕಿ ಒಕ್ಕಲಿಗರು ಮುಂತಾದ ಜನಾಂಗ ಅಧ್ಯಯನ ನಡೆಸಿ ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಇವರ ಕೃತಿ ತುಂಬಾ ಮಹತ್ವದ್ದಾಗಿರುತ್ತದೆ
*ಹೇಳ್ತೇವೋ ಗುಮಟೆ ಪದಾನಾ, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಜೇಂಗೊಡ, ನ್ಯಾಯಗಾರನ ಹೆಂಡತಿ, ಕನ್ನಡ ಬಯಲಾಟ ಪರಂಪರೆ ಮುಂತಾದ ಜಾನಪದ ವಿಷಯಗಳು ಕುವೆಂಪು ವಿಶ್ವವಿದ್ಯಾಲಯದ ಎಂ.ಎ. ಜಾನಪದ ಪಠ್ಯದಲ್ಲಿಯೂ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಎಂ ಎ ಜಾನಪದ ತರಗತಿಯ ಪಠ್ಯವಾಗಿಯೂ ಸೆರ್ಪಡೆಗೊಂಡಿದೆ.
*ಕೂಸಾಯ್ತು ನಮ್ಮ ಕೋಮರಾ*ಗೆ ಕೃತಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ, ಗಾಮೊಕ್ಕಲ, ಸುಗ್ಗಿ ಹಬ್ಬ, ಹಾಲಕ್ಕಿ ಒಕ್ಕಲಿಗರು ಕೃತಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಯಿಂದ ಪ್ರಶಸ್ತಿ ಲಭಿಸಿದೆ. ೨೦೦೩ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯಿಂದ, ಜಿ. ನಾರಾಯಣ ಅಡಿಗ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿದೆ. ಜಾನಪದ ತಜ್ಞರಾಗಿ ಇವರು ನಿವ೯ಹಿಸಿದ ಕೆಲಸಗಳು ನಾಡಿನ ಜನತೆ ಮರೆಯುವಂತಿಲ್ಲ.
ಡಾ ಎನ್ ಆರ್ ನಾಯಕ ನಿಧನಕ್ಕೆ ಉತ್ತರಕನ್ನಡ ಜಿಲ್ಲೆಯ ಸಾಹಿತ್ಯ ವೃಂದ, ನಾಡಿನ ಹಿರಿಯ ಸಾಹಿತಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.
ನುಡಿನಮನ : ಪಿ ಆರ್ ನಾಯ್ಕಹೊಳೆಗದ್ದೆ, ರಾಜ್ಯಶಿಕ್ಷಕಪ್ರಶಸ್ತಿಪುರಸ್ಕೃತರು.