ದಾಂಡೇಲಿ(DANDELI) : ಕೆಲ ದಿನಗಳ ಹಿಂದೆ ವರ್ಗಾವಣೆಯಾಗಿದ್ದ ನಗರದ ಅಂಬೇವಾಡಿಯಲ್ಲಿರುವ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ (ABDUL KALAM RESIDENCY SCHOOL PRINCIPAL) ವರ್ಗಾವಣೆ ಕ್ಯಾನ್ಸಲ್ ಮಾಡಿ ಮತ್ತೆ ವಾಪಾಸ್ ಬಂದಿರುವುದಕ್ಕೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ ಇಂದು ಅಬ್ದುಲ್ ಕಲಾಂ ವಸತಿ ಶಾಲೆಗೆ ಬರುತ್ತಿದ್ದಂತೆಯೇ , ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ವಿರೋಧ ಕಂಡ ಕಾರಿನಲ್ಲೆ ಕೂತಿದ್ದ ಪ್ರಾಚಾರ್ಯ ವಿಶ್ವನಾಥ ಕಾರಿನಿಂದ ಇಳಿಯಲು ಹಿಂದೇಟು ಹಾಕಬೇಕಾಯಿತು.
ಪ್ರಾಚಾರ್ಯರು ನಮ್ಮ ಅಪ್ಪ, ಅಮ್ಮನಿಗೆ ಬೈದಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿ ನಮಗೆ ಈ ಪ್ರಾಚಾರ್ಯರು ಬೇಡವೇ ಬೇಡ ಎಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಸ್ಥಳೀಯ ಸಾರ್ವಜನಿಕರು ಬೆಂಬಲವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಬೈಯುವ ಪ್ರಾಚಾರ್ಯ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಭೀಮಣ್ಣ ಎಂ ಸೂರಿ ಅವರು ಏರು ಧ್ವನಿಯಲ್ಲಿ ಮಾತನಾಡಿದಾಗ ಸಾರ್ವಜನಿಕರು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ರಾಚಾರ್ಯ ವಿಶ್ವನಾಥ ಅವರನ್ನು ಕಾಲೇಜಿನ ಗೇಟ್ ಹೊರಗಡೆ ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಪ್ರತಿಭಟನೆಯ ಕಾವು ಹೆಚ್ಚಾದಾಗ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್ ಮತ್ತು ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಪ್ರಾಚಾರ್ಯರು ಮತ್ತು ಸಿಬ್ಬಂದಿಗಳ ನಡುವೆ ಒಳಜಗಳ ಇರುವುದರಿಂದ ಘಟನೆಗಳು ನಡೆಯಲು ಕಾರಣವಾಗಿದೆ. ಹಾಗಾಗಿ ಪ್ರಾಚಾರ್ಯರಿಂದ ಹಿಡಿದು ಎಲ್ಲಾ ಸಿಬ್ಬಂದಿಗಳನ್ನು ಕೂಡಲೇ ವರ್ಗಾವಣೆಗೊಳಿಸಲು ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸದಸ್ಯರಾದ ಸರಸ್ವತಿ ರಜಪೂತ್, ಸಂಜಯ್ ನಂದ್ಯಾಳ್ಕರ್, ಯಾಸ್ಮಿನ್ ಕಿತ್ತೂರ್, ಶಾಹಿದಾ ಪಠಾಣ್, ರುಹಿನಾ ಖತೀಬ್, ವೆಂಕಟರಮಣಮ್ಮ ಮೈಥುಕುರಿ, ಪತ್ರಕರ್ತರಾದ ಬಿ ಎನ್ ವಾಸರೆ, ಸಂದೇಶ್ ಜೈನ್ ಇದ್ದರು.
ಇದನ್ನು ಓದಿ : ಭಟ್ಕಳ ಪಿಎಸ್ಐ ಅಮಾನತು