ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಕಾರವಾರ(Karwar) : ರಾಜ್ಯಾದ್ಯಂತ  ‘ಸಂವಿಧಾನ ಅರಿವು ಅಭಿಯಾನ’ ನಡೆಯುತ್ತಿದ್ದು  ಐದು ಸಾವಿರಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕರ ಸದಸ್ಯತ್ವ ನೋಂದಣಿ ಮಾಡಲಾಗಿದೆ ಎಂದು ಸಂವಿಧಾನ ಅರಿವು ರಾಜ್ಯ ಸಂಚಾರದ ರಾಜ್ಯಾಧ್ಯಕ್ಷ ಜಾರ್ಜ್‌ ಫರ್ನಾಂಡೀಸ್ ಹೇಳಿದರು.

ಶುಕ್ರವಾರ ನಗರದ  ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.  ‘ಸಂವಿಧಾನ ಅರಿವು’ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, 2025 ರ 1 ಜುಲೈರಂದು ಪ್ರಾರಂಭಿಸಲಾದ ಈ ಅಭಿಯಾನ ಈಗಾಗಲೇ ಒಂದು ವರ್ಷ ಪೂರೈಸುವ ಹಂತದಲ್ಲಿದೆ. ರಾಜ್ಯಾದ್ಯಂತ ಇಪ್ಪತೈದು ಸಾವಿರಕ್ಕೂ ಹೆಚ್ಚು ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸಲಾಗಿದೆ ಎಂದರು.

ಅಭಿಯಾನದಲ್ಲಿ ಜಸ್ಟೀಸ್ ಡಾ. ಎಚ್. ಎನ್. ನಾಗಮೋಹನದಾಸ ಅವರು ರಚಿಸಿದ ‘ಸಂವಿಧಾನ ಓದು’ ಪುಸ್ತಕ ವಿತರಣೆ, ‘ನಮ್ಮ ಸಂವಿಧಾನ’ ನಾಟಕ ಪ್ರದರ್ಶನ, ‘ಸಂವಿಧಾನ ಅರಿವು’ ಜಾಗೃತಿಗೀತೆ, ‘ವಿಚಾರ ಸಂಕಿರಣ’ ಮತ್ತು ‘ಸದಸ್ಯತ್ವ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

  ‘ನಮ್ಮ ಸಂವಿಧಾನ’ ನಾಟಕ ‘ವಿಚಾರ ಸಂಕಿರಣ’ ‘ಸಂವಿಧಾನ ಅರಿವು’ ‘ಜಾಗೃತಿಗೀತೆ’ ಅನೇಕ ಕಡೆಗಳಲ್ಲಿ ಏರ್ಪಡಿಸಿದ್ದೇವೆ. ಈ ಸಂಚಾರವನ್ನು ರಾಜ್ಯದ 31 ಜಿಲ್ಲೆಗಳಲ್ಲಿಯೂ ವ್ಯಾಪಕವಾಗಿ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು,  ನಮಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರೋತ್ಸಾಹ, ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.

ಜಸ್ಟೀಸ್ ಡಾ. ಎಚ್.ಎನ್.ನಾಗಮೋಹನದಾಸ ಅವರು ಸಂವಿಧಾನದ ಮಹತ್ವ ಹಾಗೂ ಜಾಗೃತಿ ಉಂಟು ಮಾಡಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ.  ಸಂಚಾರವು ನಿರಂತರವಾಗಿ ನಡೆಯಲಿದ್ದು, ಅಭಿಯಾನದಲ್ಲಿ ರಾಜ್ಯದ ಜನಪರ ಹೋರಾಟಗಾರರು, ಸಾಹಿತಿಗಳು, ಬರಹಗಾರರು ಹೀಗೆ ವಿವಿಧ ಕ್ಷೇತ್ರದ 180ಕ್ಕೂ ಹೆಚ್ಚು ಜನರ ತಂಡವನ್ನು ರಚಿಸಲಾಗಿದೆ. ಈ ರಾಜ್ಯ ಸಂಚಾರವು ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮಾತ್ರವಲ್ಲದೇ, ವಿದ್ಯಾರ್ಥಿ-ಯುವಜನರಿಗೆ, ಹಾಗೂ ಪ್ರತಿ ಮನೆ-ಮನೆಗೂ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸುವ ಗುರಿ ಹೊಂದಿದ್ದೇವೆ ಎಂದು ಜಾರ್ಜ್ ಹೇಳಿದರು.

ನಿವೃತ್ತ ಪ್ರಾಂಶುಪಾಲ ಮಹೇಶ ಗೋಳಿಕಟ್ಟೆ ಮಾತನಾಡಿ, ಗ್ರಾಮೀಣ ಭಾಗಗಳಲ್ಲೂ ‘ಸಂವಿಧಾನ ಓದು’ ಪುಸ್ತಕ ವಿತರಿಸಿ, ಅವರಲ್ಲೂ ಸಂವಿಧಾನ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂವಿಧಾನ ಅರಿವು ರಾಜ್ಯ ಸಂಚಾರದ ಪ್ರಧಾನ ಸಂಚಾಲಕ ಕೆ.ರಮೇಶ ಮಾತನಾಡಿ ಅಭಿಯಾನದ ಬಗ್ಗೆ ವಿವರ ನೀಡಿದರು.

ಇದನ್ನು ಓದಿ : ಭಟ್ಕಳದಲ್ಲಿ ಕಾರುಗಳ ನಡುವೆ ಮುಖಾಮುಖಿ‌ ಢಿಕ್ಕಿ. ಜೀವ ಉಳಿಸಿದ ಸೀಟ್ ಬೆಲ್ಟ್.