ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ದಾಂಡೇಲಿ(Dandeli): ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ. ದಾಂಡೇಲಿ ತಾಲೂಕಿನ ಐಪಿಎಮ್ ಪ್ರದೇಶದಲ್ಲಿ ಚಿರತೆಯೊಂದು ರಾತ್ರಿ ವೇಳೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಶನಿವಾರ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಚಿರತೆ(Leopard) ಐಪಿಎಮ್‌ನ ದಾಂಡೇಲಿ(Dandeli) ಜಂಗಲ್ ರೆಸಿಡೆನ್ಸಿ ಹಾಗೂ ಸಮೀಪದಲ್ಲಿರುವ ವೈಲ್ಡ್ ಟೈಗರ್ ಕ್ಯಾಂಪ್(Wild Tiger Camp) ಹೋಂಸ್ಟೇ ಆವರಣದಲ್ಲಿ ಚಿರತೆಯೊಂದು ಓಡಾಡಿದೆ. ಚಿರತೆಯ ಹೆಜ್ಜೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಚಿರತೆ(Leopard) ಕಾಣಿಸಿದೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಚಿರತೆಯೊಂದು ರಸ್ತೆ ದಾಟುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸ್ಥಳೀಯರ ಪ್ರಕಾರ, ಕಳೆದ ಒಂದೆರಡು ವರ್ಷಗಳಿಂದ ಐಪಿಎಮ್ ಸುತ್ತಮುತ್ತ ರಾತ್ರಿ ವೇಳೆ ಚಿರತೆಗಳ ಓಡಾಟ ಜಾಸ್ತಿಯಾಗುತ್ತಿದೆ. ಇಲ್ಲಿ ಬೀದಿ ಶ್ವಾನಗಳು ಹೆಚ್ಚಿರುವುದರಿಂದ ಆಹಾರ ಹುಡುಕಿ ಬರುತ್ತಿರಬಹುದೆಂದು ಅಂದಾಜಿಸಲಾಗಿದೆ.

ಚಿರತೆಗಳ ನಿರಂತರ ಸಂಚಾರದಿಂದಾಗಿ ರಾತ್ರಿ ಸಮಯದಲ್ಲಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುವ ಸ್ಥಳೀಯರು ಮತ್ತು ಪ್ರವಾಸಿಗರು ಆತಂಕದಲ್ಲಿದ್ದಾರೆ.

ಚಿರತೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ(Forest Department) ಹೆಚ್ಚಿನ ನಿಗಾ ವಹಿಸಿ, ಜನರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.