ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news)ಹೊನ್ನಾವರ(Honnavar):ತಾಲೂಕಿನ ಗೇರುಸೊಪ್ಪ(Gerusoppa) ಸಮೀಪದ ದಾಪಗಾಲಮಕ್ಕಿಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯಿಂದ ಡೀಸೆಲ್ ಕಳ್ಳತನ(Diesel Theft) ಮಾಡಿದ್ದ ಮೂವರು ಅಂತರಜಿಲ್ಲಾ ಕಳ್ಳರನ್ನು ಹೊನ್ನಾವರ ಪೊಲೀಸರು(Honnavar Police) ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೇರುಸೊಪ್ಪ ದಾಪಗಾಲಮಕ್ಕಿಯ ನಿವಾಸಿ ಮೂಸಾ ಹಸನ್ ಸಾಬ್ ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿಯನ್ನು ಎಂದಿನಂತೆ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಹೊಂಚು ಹಾಕಿದ ಖದೀಮರು, ಟಿಪ್ಪರ್‌ನ ಡೀಸೆಲ್ ಟ್ಯಾಂಕ್‌ನಿಂದ ಸುಮಾರು 140 ಲೀಟರ್ ಡೀಸೆಲ್ ಅನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ದಾಖಲಾದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಹೊನ್ನಾವರ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಮೂವರೂ ಆರೋಪಿಗಳು ಶಿವಮೊಗ್ಗ(Shivamogga) ಜಿಲ್ಲೆಯವರಾಗಿದ್ದು,ಯೂಸುಫ್ ಶಬ್ಬೀರ ಖಾನ್ (28), ಮಹಮದ್ ಗೌಸ್ ಮಹಮದ್ ಹಯಾಸ್ ಸಾಬ್(38) ಮತ್ತುಸಯದ್ ಸಿಖಂದರ್ ಸಯದ್ ಸಾಬ್(22) ಎಂಬುವವರಾಗಿದ್ದಾರೆ.

ಡೀಸೆಲ್ ಕಳ್ಳತನದ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹೊನ್ನಾವರ ಕ್ರೈಮ್ ಪಿ.ಎಸ್.ಐ ಮಹಾಂತೇಶ್ ವಾಲ್ಮೀಕಿ ಹಾಗೂ ಅವರ ಸಿಬ್ಬಂದಿಗಳ ತಂಡವು ತಾಂತ್ರಿಕ ಹಾಗೂ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.