ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar) : ರೇಶನ್(Ration) ವಿತರಣೆ ಹಾಗೂ ಇ-ಕೆವೈಸಿ ಮಾಡುವುದರಲ್ಲಿ ಆಗುತ್ತಿರುವ ತಾಂತ್ರಿಕ(Technical) ಹಾಗೂ ಇತರೆ ಸಮಸ್ಯೆ ನಿವಾರಿಸುವಂತೆ ಕಾರವಾರ ತಾಲೂಕಾ ಗ್ರಾಮೀಣ ಹಾಗೂ ನಗರ ನ್ಯಾಯಬೆಲೆ ಅಂಗಡಿ ಮಾಲೀಕರ ಹಾಗೂ ನೌಕರರ ಒಕ್ಕೂಟ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ ಉತ್ತರ ಕನ್ನಡ(Uttarkannada) ಜಿಲ್ಲೆಯ ನ್ಯಾಯ ಬೆಲೆ ಅಂಗಡಿಕಾರರು ತಾವು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಕೇಂದ್ರ ಸರಕಾರದ ಆಹಾರ ಸುರಕ್ಷತಾ ಯೋಜನೆ(Central Government Food Saftey Scheme) ಹಾಗೂ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ(State Government Annabhagya Scheme) ಅಡಿಯಲ್ಲಿ ಪ್ರತಿ ತಿಂಗಳು ತಲಾ ಒಬ್ಬರಿಗೆ ಕೇಂದ್ರದಿಂದ 5.00 ಕೆಜಿ ಹಾಗೂ ರಾಜ್ಯ ಸರಕಾರದಿಂದ 5.00 ಕೆಜಿ ಅಕ್ಕಿ ಒಟ್ಟಾರೆಯಾಗಿ 10.00 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಕೇಂದ್ರ ಸರಕಾರದಿಂದ 35.00 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನ್ಯಾಯಬೆಲೆ ಅಂಗಡಿ ಮುಖಾಂತರ ಜೀವಮಾನ ದೃಢೀಕರಣ (POS) ಮುಖಾಂತರ ವಿತರಿಸಲಾಗುತ್ತಿದೆ. ಆದರೆ ಈ ಸಂಬಂಧ ಈವರೆಗೆ ನ್ಯಾಯಬೆಲೆ ಅಂಗಡಿಕಾರರು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಿಯೂ ನ್ಯಾಯಯುತವಾಗಿ ಪಡಿತರವನ್ನು ವಿತರಣೆ ಮಾಡಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸರಕಾರದ ನಿಯಮದಂತೆ ಪಡಿತರವನ್ನು ವಿತರಣೆ ಮಾಡುತ್ತಿದ್ದರು. ಇದರ ಜೊತೆಗೆ ಈ ತಿಂಗಳ ಒಂದನೇ ತಾರೀಕಿನಿಂದ ಪಡಿತರದಾರರ ಈ ಕೆವೈಸಿ ಕಾರ್ಯವನ್ನು ಕೈಗೊಳ್ಳಬೇಕೆಂದು ಮೇಲಾಧಿಕಾರಿಗಳು ಆದೇಶಿಸಿದ್ದಾರೆ.

ಈ ಹಿಂದಿನಂತೆಯೇ ನಮ್ಮ ನ್ಯಾಯಬೆಲೆ ಅಂಗಡಿಕಾರರ ಸಂಪೂರ್ಣ ಬೆಂಬಲವಿದೆ. ಆದರೆ ಈ ಸಂಬಂಧ ಈ ಕೆಳಗಿನ ಹಲವಾರು ಸಮಸ್ಯೆಗಳನ್ನು ಸರಕಾರವು ಗಮನ ಹರಿಸಿ ನಿವಾರಿಸಿದ್ದಲ್ಲಿ ಮಾತ್ರ ಇದು ಸಾಧ್ಯವಾಗಬಹುದು ಎಂದು ಅವರು ಹೇಳಿದ್ದಾರೆ.

ಆಗುತ್ತಿರುವ ತೊಂದರೆಗಳು ಮತ್ತು ಬೇಡಿಕೆಗಳು : ಕಳೆದ ಹಲವಾರು ತಿಂಗಳುಗಳಿಂದ ರೇಸನ್ ವಿತರಣೆಯಲ್ಲಿ ಸರ್ವರ್ ಸಮಸ್ಯೆ ತೀವ್ರ ಕಳಪೆ ಮಟ್ಟದಲ್ಲಿದ್ದು ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಈ ಕೆವೈಸಿಯನ್ನು(Ekyc) ಮಾಡಲು ಸಹ ಸಾಧ್ಯವಾಗಲಾರದು.
ಕಳೆದ 5 ವರ್ಷದ ಹಿಂದೆ ಈ ಕೆವೈಸಿಯನ್ನು ಮಾಡಿದ ಕಮೀಶನ್ ಹಣ ಈವರೆಗೆ ಒಂದು ನಯಾ ಪೈಸೆಯೂ ಬಿಡುಗಡೆಯಾಗಿದ್ದು ಇರುವುದಿಲ್ಲ.
ಇ ಕೆವೈಸಿಯನ್ನು ಮಾಡುವಾಗ ಕಾರ್ಡಿನಲ್ಲಿ ಕನಿಷ್ಟ 3-5 ಜನ ಸದಸ್ಯರು ಇರುವುದರಿಂದ ಒಬ್ಬ ನೌಕರನಿಂದ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಎರವಲು ಸೇವೆಯನ್ನು ಪಡೆಯಬೇಕಾಗಿರುತ್ತದೆ. ಹಾಗೂ ಅವರಿಗೆ ವೇತನ ನೀಡಬೇಕಾಗುತ್ತದೆ.
ಪ್ರತೀ ತಿಂಗಳು ಬರಬೇಕಾದ ರೇಶನ್ ವಿತರಣೆಯ ಕಮೀಶನ್ ಹಣ ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ನೌಕರರಿಗೆ ವೇತನ ನೀಡಲು ಅಂಗಡಿ ಬಾಡಿಗೆ ನೀಡಲು ತೊಂದರೆಯಾಗುತ್ತದೆ.
ನ್ಯಾಯಬೆಲೆ ಅಂಗಡಿಯನ್ನು ಬೆಳಿಗ್ಗೆ 6.00 ರಿಂದ ರಾತ್ರಿ 10.00 ರವರೆಗೆ ಕಾರ್ಯನಿರ್ವಹಿಸಲು ಆದೇಶಿರುತ್ತಾರೆ. ನ್ಯಾಯ ಬೆಲೆ ಅಂಗಡಿಯಲ್ಲಿರುವ ನೌಕರರಿಗೆ ಇದು ಸಾಧ್ಯವೇ ? ಈ ಅವೈಜ್ಞಾನಿಕವಾದ ನಿರ್ಧಾರವನ್ನು ಪುನಃ ಪರಿಶಿಲಿಸಬೇಕು.ಇಲ್ಲವೇ ಸರಕಾರದಿಂದ ಹೆಚ್ಚುವರಿಯಾಗಿ ಕಮೀಶನ್ ಹಣವನ್ನು ನೀಡುವ ವ್ಯವಸ್ಥೆ ಆಗಬೇಕು.
ಈ ಸರ್ವರ್ ಸಮಸ್ಯೆ ಕೇವಲ ರೇಶನ್ ಅಂಗಡಿಕಾರರಿಗೆ ಅಷ್ಟೇ ಅಲ್ಲದೇ ಬಡ ರೇಶನ್ ಕಾರ್ಡದಾರರಿಗೂ ಸಮಸ್ಯೆ ತಂದೊಡ್ಡಿರುತ್ತದೆ. ಬೆಳಿಗ್ಗೆಯಿಂದ ತನ್ನ ಕೂಲಿ ಕೆಲಸವನ್ನು ಬಿಟ್ಟು ರೇಶನ್ ಎತ್ತುವಳಿಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಇಡೀ ದಿನ ನಿಂತಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊನೆಯಲ್ಲಿ ಕಾರ್ಡುದಾರರು ರೇಶನ್ ಅಂಗಡಿಯ ಮಾಲೀಕ ನೌಕರ ಅವರ ಹೆಂಡತಿ ಮಕ್ಕಳು ತಂದೆ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುವ ಪರಿಸ್ಥಿತಿ ಬಂದೊದಗಿದೆ.

ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಕಾರರು ಸರಕಾರವು ನೀಡುವ ನಿರ್ದೇಶನವನ್ನು ಪಾಲಿಸಿ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ. ಒಂದಾನುವೇಳೆ ಸರಕಾರವು ಅತೀ ಶೀಘ್ರದಲ್ಲಿ ಇದಕ್ಕೆ ಸ್ಪಂದಿಸದಿದ್ದಲ್ಲಿ ಮುಂದಾಗುವ ತೊಂದರೆಗಳಿಗೆ ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ನೌಕರರು ಜವಾಬ್ದಾರರಲ್ಲವೆಂದು ಅವರು ಹೇಳಿದ್ದಾರೆ. ಆದ್ದರಿಂದ ಸರಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಾಗಿ ಅಂಗಡಿಕಾರರು ವಿನಂತಿಸಿದ್ದಾರೆ.