ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn) : ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ(Gokarn Kudle beach) ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನೊಬ್ಬನನ್ನು ಜೀವರಕ್ಷಕ ಸಿಬ್ಬಂದಿಗಳು ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ನಡೆದಿದೆ.
ರಕ್ಷಣೆಗೊಳಗಾದ ಪ್ರವಾಸಿಗನನ್ನು ಬಿಹಾರ ಮೂಲದ(Bihar Native) 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಮನುರಾಜ್ ಎಂದು ಗುರುತಿಸಲಾಗಿದೆ.
ಮನುರಾಜ್ ತಮ್ಮ ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಕುಡ್ಲೆ ಬೀಚ್ನಲ್ಲಿ ಸಮುದ್ರಕ್ಕಿಳಿದು ಆಟವಾಡುತ್ತಿದ್ದ ವೇಳೆ, ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ಮನುರಾಜ್ ಸೇರಿದಂತೆ ಮೂವರು ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದ್ದಾರೆ. ಅಪಾಯವನ್ನು ಅರಿತ ಸ್ಥಳೀಯರು ಹಾಗೂ ಪ್ರವಾಸಿಗರು ತಕ್ಷಣವೇ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ‘ಮೈಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ (Mystic Adventure Water Sports) ಸಂಸ್ಥೆಯ ಸಿಬ್ಬಂದಿಗಳು ಸಮುದ್ರಕ್ಕೆ ಧುಮುಕಿ, ಅಪಾಯದಲ್ಲಿದ್ದವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗಳ ಈ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣಾ(Gokarn Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.