ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಹೊನ್ನಾವರ(Honnavar): ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರವಾದ ತಲವಾರು ಪ್ರದರ್ಶಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಲ್ಲದೆ, ಆ ಕೃತ್ಯದ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್ನಲ್ಲಿ ಹರಿಬಿಟ್ಟ ಆರೋಪದ ಮೇಲೆ ಇಬ್ಬರು ಯುವಕರ ವಿರುದ್ಧ ಹೊನ್ನಾವರ(Honnavar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ರಾಯಲಕೇರಿ ನಿವಾಸಿಗಳಾದ ಲಕ್ಷ್ಮಿನಾರಾಯಣ ಗಣಪತಿ ನಾಯ್ಕ (19) ಹಾಗೂ ಅಜಿತ ಗಜಾನನ ನಾಯ್ಕ (29) ಪ್ರಕರಣದ ಆರೋಪಿಗಳಾಗಿದ್ದಾರೆ.
ಸ್ಥಳೀಯರು ನೀಡಿದ ಪೆನ್ಡ್ರೈವ್ ಸಾಕ್ಷ್ಯದ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪೆನ್ಡ್ರೈವ್ನಲ್ಲಿದ್ದ 27 ಸೆಕೆಂಡ್ಗಳ ವಿಡಿಯೋವನ್ನು ಪರಿಶೀಲಿಸಿದಾಗ, ಆರೋಪಿ ಲಕ್ಷ್ಮಿನಾರಾಯಣ ನಾಯ್ಕ ಸಾರ್ವಜನಿಕ ಸ್ಥಳದಲ್ಲಿ ತಲವಾರನ್ನು ಹೆಗಲ ಮೇಲಿಟ್ಟುಕೊಂಡು ತಿರುಗಾಡುತ್ತಿರುವುದು ಕಂಡುಬಂದಿದೆ.
ಮತ್ತೊಂದೆಡೆ, ಬೈಕ್ನಲ್ಲಿ ಮೂವರು ಸಾಗುತ್ತಿದ್ದ ವೇಳೆ ಮಧ್ಯದಲ್ಲಿ ಕುಳಿತಿದ್ದ ಅಜಿತ ಗಜಾನನ ನಾಯ್ಕ, ತಲವಾರನ್ನು ರಸ್ತೆಗೆ ಉಜ್ಜಿಕೊಂಡು ಹೋಗಿದ್ದು, ಇದರಿಂದ ರಸ್ತೆಯಲ್ಲಿ ಬೆಂಕಿಯ ಕಿಡಿಗಳು ಚಿಮ್ಮಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಪದಗಳಿಂದ ನಿಂದಿಸಿರುವುದು ಕೂಡ ವಿಡಿಯೋದಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಆತಂಕ ಮೂಡಿಸಿದ ಆರೋಪದಡಿ ಇಬ್ಬರ ವಿರುದ್ಧ ಹೊನ್ನಾವರ ಪೊಲೀಸರು(Honnavar Police) ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.