ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ರಾಜ್ಯದಿಂದ ಗೋವಾಕ್ಕೆ ಅಕ್ರಮವಾಗಿ ರೆಕ್ಟಿಫೈಡ್ ಸ್ಪಿರಿಟ್ (RS) ಮತ್ತು ಎಕ್ಸ್‌ಟ್ರಾ ನ್ಯೂಟ್ರಲ್ ಆಲ್ಕೋಹಾಲ್ (ENA) ಸಾಗಾಟವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

​ಕಾರವಾರದ(Karwar) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಉತ್ತರಕನ್ನಡ ಜಿಲ್ಲಾ ಕೆಡಿಪಿ (KDP) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಮುಗಿಯುತ್ತಾ ಬಂದರೂ ಅಬಕಾರಿ ಇಲಾಖೆಯ ಉಪ ಆಯುಕ್ತರು (DC) ಗೈರಾಗಿದ್ದಕ್ಕೆ ಮತ್ತು ಇಲಾಖೆಯ ಕಾರ್ಯವೈಖರಿಗೆ ಸಚಿವರು ಕೆಂಡಾಮಂಡಲರಾದರು.

​ಅಧಿಕಾರಿಗಳ ವಿರುದ್ಧ ಸಚಿವರ ಆಕ್ರೋಶ:“ಗೋವಾದಿಂದ ಕಳ್ಳ ಸಾಗಾಣಿಕೆ ಮೂಲಕ ರಾಜ್ಯಕ್ಕೆ ಮದ್ಯ ಬರುತ್ತಿದೆ. ಇತ್ತ ನಮ್ಮ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಅಕ್ರಮವಾಗಿ ENA ಮತ್ತು RS ಗೋವಾಕ್ಕೆ ಸರಬರಾಜಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದರಲ್ಲಿ ದೊಡ್ಡ ಜಾಲವೇ ಇದ್ದು, ನಿಮ್ಮ ಇಲಾಖೆಯವರೇ ಇದನ್ನು ಸೃಷ್ಟಿ ಮಾಡಿದ್ದೀರಿ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?” ಎಂದು ಸಚಿವ ಸವದಿ ಕಿಡಿಕಾರಿದರು.

​ಟ್ಯಾಂಕರ್ ಸಾಗಾಟದ ಬಗ್ಗೆ ಖಡಕ್ ಪ್ರಶ್ನೆ:ಸಭೆಯಲ್ಲಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿ, “ಈಗಾಗಲೇ ತನಿಖಾ ಠಾಣೆಯಲ್ಲಿ ದಾವಣಗೆರೆ ಶುಗರ್ ಫ್ಯಾಕ್ಟರಿಯಿಂದ ಬಂದಿದ್ದ ಮೂರು ಟ್ಯಾಂಕರ್‌ಗಳನ್ನು ಸೀಝ್ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

​ಇದಕ್ಕೆ ಮತ್ತಷ್ಟು ಗರಂ ಆದ ಸಚಿವರು, “ನೀವು ಹಿಡಿದಿರುವುದು ಮೂರು ಮಾತ್ರ, ಹಿಡಿಯದೆ ಬಿಟ್ಟಿರುವ ಟ್ಯಾಂಕರ್‌ಗಳೆಷ್ಟು? ಯಾವುದೇ ಡಿಸ್ಟಿಲರಿಯಿಂದ ಟ್ಯಾಂಕರ್ ಹೊರಬರಬೇಕಾದರೆ ಇಲಾಖೆಯ ಅನುಮತಿ ಬೇಕು. ಹಾಗಿರುವಾಗ ದಾವಣಗೆರೆಯಿಂದ ಕಾರವಾರದವರೆಗೆ ಅನುಮತಿ ಇಲ್ಲದೆ ಹೇಗೆ ಬಂತು? ಯಾವ ಯಾವ ಫ್ಯಾಕ್ಟರಿಯಿಂದ ಎಷ್ಟು ENA ಗೋವಾಕ್ಕೆ(Goa) ಹೋಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ನನಗಿದೆ” ಎಂದು ಗುಡುಗಿದರು.

​ಮನೆಗೆ ಕಳುಹಿಸುವ ಎಚ್ಚರಿಕೆ: “ಇದು ಇಲ್ಲಿಯವರೆಗೆ ಸರ್ಕಾರದ ಗಮನಕ್ಕೆ ಬಂದಿರಲಿಲ್ಲ, ಈಗ ಸಾರ್ವಜನಿಕರಿಂದ ನನಗೆ ಮಾಹಿತಿ ಬಂದಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಇನ್ಮೇಲೆ ಹುಷಾರಾಗಿ ಇರಿ, ನಿಮಗೆ ಬಲೆ ಹಾಕ್ತೇನೆ. ಇನ್ನು ಮುಂದೆ ಒಂದೇ ಒಂದು ಟ್ಯಾಂಕರ್ ಅಕ್ರಮವಾಗಿ ಗೋವಾಕ್ಕೆ ಹೋದರೂ ಅಬಕಾರಿ ಜಿಲ್ಲಾಧಿಕಾರಿ ಸಹಿತ ಎಲ್ಲರನ್ನೂ ಮನೆಗೆ ಕಳುಹಿಸುತ್ತೇನೆ, ನಾನಂತೂ ಸುಮ್ಮನೆ ಬಿಡಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.

​ಅಲ್ಲದೆ, ಕರ್ತವ್ಯ ಲೋಪ ಎಸಗಿರುವ ಅಬಕಾರಿ (Exice) ಅಧಿಕಾರಿಗಳ ವಿರುದ್ಧ ವರದಿ (ರಿಪೋರ್ಟ್) ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಅಕ್ರಮ ಸಾಗಾಟದ ಮೇಲೆ ವಿಶೇಷ ನಿಗಾ ವಹಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ (SP) ಸೂಚನೆ ನೀಡಿದರು.