ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿರಸಿ(Sirsi) :  ಭತ್ತದ ಗದ್ದೆಗೆ ಅಕ್ರಮವಾಗಿ ವಿದ್ಯುತ್‌ ಹರಿಸಿದ್ದರಿಂದ ಗಂಡಾನೆಯೊಂದು(Elephant) ಮೃತಪಟ್ಟಿರುವ ಘಟನೆ ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ಸಂಭವಿಸಿದೆ.

ಆನೆಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತನೊಬ್ಬ ಗದ್ದೆಯ ಸುತ್ತ ವಿದ್ಯುತ್ ಬೇಲಿ ಹಾಕಿದ್ದ ಎನ್ನಲಾಗಿದ್ದು, ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಶಿರಸಿ ವಿಭಾಗದ ಬನವಾಸಿ ವೃತ್ತದ (Sirsi division Banavasi Circle) ಅರಣ್ಯಾಧಿಕಾರಿಗಳು, ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ತಂದೆ ಹಾಗೂ ಮಗನನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಮಳಲಗಾಂವ್ ಗ್ರಾಮ(Malalagaum Village)ದ ಶಿವಪ್ಪ ಬಂಗಾರ್ಯ ನಾಯ್ಕ (76) ಹಾಗೂ ಅವರ ಮಗ ನಾಗರಾಜ್ ಶಿವಪ್ಪ ನಾಯ್ಕ (40) ಎಂದು ಹೇಳಲಾಗಿದೆ.

ವಿದ್ಯುತ್ ಲೈನ್‌ನಿಂದ ನೇರವಾಗಿ ಭತ್ತದ ಗದ್ದೆಯ ಬೇಲಿಗೆ ವಿದ್ಯುತ್ ಹರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಎಫ್ ಸಂದೀಪ್ ಹಿಂದೂರಾವ್‌ ಸೂರ್ಯವಂಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಗಂಡಾನೆಯ ಮೃತದೇಹವನ್ನು ತಜ್ಞರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.