ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli): ಉತ್ತರಕನ್ನಡ ಜಿಲ್ಲೆಯ ದಾಂಡೇಲಿ()Dandeli ತಾಲೂಕಿನಲ್ಲಿ ವನ್ಯಮೃಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಣಸೋಲಿ ಗ್ರಾಮದ ಬಳಿ ಭಾನುವಾರ ಸಂಜೆ ವ್ಯಕ್ತಿಯೊಬ್ಬರ ಮೇಲೆ ಕರಡಿ ಏಕಾಏಕಿ ಭೀಕರ ದಾಳಿ ನಡೆಸಿದೆ.
ಪಣಸೋಲ(Pansoli) ನಿವಾಸಿ ಅಪ್ಪು ಬೊಮ್ಮ ಪಿಂಗಳೆ (34) ಕರಡಿ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ದುರ್ದೈವಿ. ಅಪ್ಪು ಎಂದಿನಂತೆ ಕಾಡಿನ ಅಂಚಿನಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ವಾಪಸ್ ಆಗುತ್ತಿದ್ದಾಗ ಪೊದೆಯಲ್ಲಿದ್ದ ಕರಡಿ ಏಕಾಏಕಿ ಇವರ ಮೇಲೆರಗಿದೆ.
ಕರಡಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಪ್ಪು ಅವರ ಬಲಬುಜ, ಸೊಂಟ, ಬೆನ್ನು ಹಾಗೂ ಎಡಗೈಗೆ ಗಂಭೀರ ಗಾಯಗಳಾಗಿವೆ. ವ್ಯಕ್ತಿಯ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕರಡಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಗಾಯಾಳುವನ್ನು ರಕ್ಷಿಸಿ, ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಸ್ಥರಲ್ಲಿ ಹೆಚ್ಚಿದ ಭೀತಿ: ದಾಂಡೇಲಿ(Dandeli) ತಾಲೂಕಿನಲ್ಲಿ ಒಂದೇ ವಾರದಲ್ಲಿ ನಡೆದಿರುವ ಎರಡನೇ ಕರಡಿ ದಾಳಿ ಇದಾಗಿದೆ. ಬ್ಯಾಕ್ ವಾಟರ್ ಹಾಗೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪಣಸೋಲಿ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಈ ಘಟನೆಯಿಂದ ಭೀತಿ ಆವರಿಸಿದೆ. ಕಾಡಿನ ಅಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.