ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ(Shivamogga): ಮಲೆನಾಡು ಶಿವಮೊಗ್ಗದಲ್ಲಿ(Malnad Shivamogga) ಮತ್ತೊಮ್ಮೆ ರೌಡಿ ದಂಗಲ್ ಮುನ್ನೆಲೆಗೆ ಬಂದಿದ್ದು, ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಶಿವಮೊಗ್ಗ(Shivamoga) ತಾಲೂಕಿನ ರಾಮಿನಕೊಪ್ಪ ಬಳಿ ಈ ಘಟನೆ ನಡೆದಿದ್ದು ನಗರದ ಸಿಗೇಹಟ್ಟಿ- ಭಾರತಿ ಕಾಲೋನಿ ನಿವಾಸಿಯಾದ ಕಿರಣ್ ಅಲಿಯಾಸ್ ‘ಕುಳ್ಳಿ ಕಿರಣ್’ (32) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ.
ಖಾಸಗಿ ಹಣಕಾಸು ವ್ಯವಹಾರ ಹಾಗೂ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ರಾಮಿನಕೊಪ್ಪದ ಬಳಿ ಕುಳ್ಳಿ ಕಿರಣ್ ತನ್ನ ಸ್ನೇಹಿತರ ಜೊತೆಗಿದ್ದಾಗ ಈ ದಾಳಿ ನಡೆದಿದೆ. ಹಠಾತ್ತನೆ ನುಗ್ಗಿದ 2 ರಿಂದ 3 ದುಷ್ಕರ್ಮಿಗಳ ಗ್ಯಾಂಗ್, ಚಾಕು ಹಾಗೂ ಮಾರಕಾಸ್ತ್ರಗಳಿಂದ ಕಿರಣ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡ ಕಿರಣ್ನನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆತ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಸದ್ಯ ಮೃತದೇಹವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ಹಾಗೂ ತುಂಗಾನಗರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ವೈಯಕ್ತಿಕ ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿಯೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ” ಎಂದು ಎಸ್ಪಿ ನಿಖಿಲ್ ಮಾಹಿತಿ ನೀಡಿದ್ದಾರೆ.
ಕೃತ್ಯ ಎಸಗಿದ ತಕ್ಷಣ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಈ ಘಟನೆ ತಾಲೂಕಿನ ತುಂಗಾನಗರ ಪೊಲೀಸ್ ಠಾಣಾ(Tunganagar Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶಿವಮೊಗ್ಗದಲ್ಲಿ ಮತ್ತೆ ರಕ್ತ ಹರಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.