ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ(Shivamogga): ತಾಳಗುಪ್ಪದಿಂದ ಬೆಂಗಳೂರಿಗೆ (Talaguppa to Banglore) ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ (Express Train) ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ತಾಲೂಕಿನ ಅರಸಾಳು ಬಳಿ ಬೃಹತ್ ಗಾತ್ರದ ಮರವೊಂದು ರೈಲ್ವೆ ಹಳಿ ಮೇಲೆ ಉರುಳಿ ಬಿದ್ದು, ವಿದ್ಯುತ್ ಲೈನ್ (OHE) ಸಂಪೂರ್ಣವಾಗಿ ತುಂಡಾಗಿ ಬಿದ್ದ ಕಾರಣ ರೈಲು ಸಂಚಾರ ದಿಢೀರ್ ಸ್ಥಗಿತಗೊಂಡಿದೆ.
ಗೌರಿ-ಗಣೇಶ ಹಬ್ಬದ ರಜೆ ಮುಗಿಸಿ ರಾಜಧಾನಿ ಬೆಂಗಳೂರಿಗೆ (Capital Banglore) ಮರಳುತ್ತಿದ್ದ ನೂರಾರು ಐಟಿ ಉದ್ಯೋಗಿಗಳು, ಖಾಸಗಿ ಕಂಪನಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಾರ್ಗಮಧ್ಯದಲ್ಲೇ ಗಂಟೆಗಳ ಕಾಲ ಪರದಾಡುವಂತಾಯಿತು.

ತಪ್ಪಿದ ದೊಡ್ಡ ಅನಾಹುತ : ಅರಸಾಳು ಬಳಿ ಹಳಿಯ ಮೇಲೆ ಮರ ಬಿದ್ದ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿಬ್ಬಂದಿಯ ಜಾಗರೂಕತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರೈಲನ್ನು ತಕ್ಷಣವೇ ಆನೆಕೆರೆ ಮತ್ತು ನೆವಟೂರು ಗ್ರಾಮಗಳ ಮಧ್ಯೆ ಸುರಕ್ಷಿತವಾಗಿ ನಿಲ್ಲಿಸಲಾಯಿತು. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ತೆರವು ಕಾರ್ಯಾಚರಣೆ : ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರೈಲ್ವೆ ಪೊಲೀಸ್ ಪಡೆ (RPF), ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ತಾಂತ್ರಿಕ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು. ಹಳಿಯ ಮೇಲೆ ಬಿದ್ದಿದ್ದ ಭಾರೀ ಮರವನ್ನು ಕತ್ತರಿಸಿ ತೆರವುಗೊಳಿಸಿದ ಸಿಬ್ಬಂದಿ, ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೂಕ್ತ ನಿರ್ವಹಣೆಯ ನಂತರ ರೈಲು ಸಂಚಾರವನ್ನು ಮರುಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.



