ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಹೊನ್ನಾವರ(Honnavar) : “ಸಚಿವ ಸ್ಥಾನವೇ ಆಗಲಿ, ವಿಧಾನಸಭೆಯ ಉಪ ಸಭಾಪತಿ ಹುದ್ದೆಯೇ ಆಗಲಿ; ಜನರಿಗೆ ಸಹಾಯ ಮಾಡಲು ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಯಾವ ಹುದ್ದೆಯೂ ಯಾರಿಗೂ ಶಾಶ್ವತವಲ್ಲ, ನಾನು ಯಾವ ಹುದ್ದೆಯಲ್ಲಿದ್ದರೂ ಜನಸಾಮಾನ್ಯನಾಗಿಯೇ ಕಾರ್ಯನಿರ್ವಹಿಸುತ್ತೇನೆ,” ಎಂದು ವಿಧಾನಸಭೆಯ ಉಪ ಸಭಾಪತಿ ಮಂಕಾಳ ವೈದ್ಯ ಹೇಳಿದ್ದಾರೆ.

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿಘ್ನವಿನಾಶಕನಲ್ಲಿ ಸಮೃದ್ಧಿಗೆ ಪ್ರಾರ್ಥನೆ:
“ಇಡಗುಂಜಿ ವಿನಾಯಕ ನನ್ನ ಆರಾಧ್ಯ ದೇವರು. ಈ ವರ್ಷ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನಾಡಿನ ಜನರಿಗೆ ಹಾಗೂ ರೈತರಿಗೆ ಸುಖ, ಶಾಂತಿ ಮತ್ತು ಸಮೃದ್ಧಿ ಕರುಣಿಸಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸಿದ್ದೇನೆ. ನಾನು ಕೇಳಿದ್ದನ್ನೆಲ್ಲವನ್ನೂ ಆ ಗಣಪತಿ ನನಗೆ ಕೊಟ್ಟಿದ್ದಾನೆ. ಅವನ ಇಚ್ಛೆಯಂತೆಯೇ ಎಲ್ಲವೂ ನಡೆದಿದೆ, ನಡೆಯುತ್ತಿದೆ ಮತ್ತು ಮುಂದೆಯೂ ನಡೆಯಲಿದೆ,” ಎಂದರು.

ಹುದ್ದೆಗಳ ಬಗ್ಗೆ ಬೇಸರವಿಲ್ಲ: ಸ್ಥಾನಮಾನಗಳ ಕುರಿತು ಮಾತನಾಡಿದ ಅವರು, “ನನಗೆ ಯಾವುದೇ ಬೇಸರ ಅಥವಾ ವ್ಯತ್ಯಾಸದ ಭಾವನೆ ಇಲ್ಲ. ಸಚಿವನಾಗಿದ್ದಾಗ ಜನರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿತ್ತು, ಈಗಲೂ ಎಲ್ಲಾ ಇಲಾಖೆಗಳ ಮೂಲಕ ಜನರ ಕೆಲಸಗಳನ್ನು ಮಾಡಿಕೊಡಬಹುದು. ಉಪ ಸಭಾಪತಿ ಹುದ್ದೆಗೆ ಏರಿದ ತಕ್ಷಣ ಕಟ್ಟುಪಾಡುಗಳು ಬರುತ್ತವೆ ಎಂಬುದು ತಪ್ಪು ಕಲ್ಪನೆ. ಅದೂ ಕೂಡ ಜನರ ಸಮಸ್ಯೆಗೆ ಸ್ಪಂದಿಸಲು ಇರುವ ಒಂದು ಜವಾಬ್ದಾರಿಯುತ ಹುದ್ದೆ,” ಎಂದು ಸ್ಪಷ್ಟಪಡಿಸಿದರು.
ವಿರೋಧಿಗಳಿಗೆ ಎಚ್ಚರಿಕೆ: ರಾಜಕೀಯವಾಗಿ ಪರ-ವಿರೋಧ ಮಾತನಾಡುವವರ ಕುರಿತು ಪ್ರತಿಕ್ರಿಯಿಸುತ್ತಾ, “ರಾಜಕೀಯ ವಿಚಾರಗಳಲ್ಲಿ ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕು. ಯೋಚಿಸದೆ ಮಾತನಾಡಿದರೆ ನಾವು ಪ್ರತಿಕ್ರಿಯಿಸಬೇಕಾಗುತ್ತದೆ. ಮಾತನಾಡಬಾರದು ಎಂಬ ಯಾವುದೇ ಕಟ್ಟುಪಾಡು ನನಗಿಲ್ಲ. ಯಾವ ಹುದ್ದೆಗೆ ಹೋದರೂ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ,” ಎಂದು ಹೇಳಿದರು.
